ಉದಯವಾಹಿನಿ, ಔರಾದ್ :ವಿಧ್ಯಾರ್ಥಿಗಳ ಒಳಿತಿಗಾಗಿ ಚಿಂತಿಸುವ, ಸರ್ವತ್ಯಾಗ ಮಾಡುವ ಶಿಕ್ಷಕರು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿದ್ದಾರೆ. ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ತಮ್ಮ ಜೀವನವನ್ನು ತೇಯುವ ಶಿಕ್ಷಕ ಸಮಾಜಕ್ಕೆ ಮಾದರಿ ಎಂದು ಶಿಕ್ಷಕ ಶಿವಕುಮಾರ್ ಬಂಬುಳಗೆ ಹೇಳಿದರು. ತಾಲೂಕಿನ ನಾಗಮಾರಪಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಗತ್ತಿನಲ್ಲಿ ಆಧುನಿಕತೆಯ ನೆಪದಲ್ಲಿ ತತ್ವ ಮೌಲ್ಯಗಳು ಮತ್ತು ಸಂಸ್ಕಾರಗಳು ವೇಗವಾಗಿ ಬದಲಾಗುತ್ತಿದೆ. ಜೀವನ ಶೈಲಿಯೂ ಬದಲಾಗುತ್ತದೆ. ಗುರು-ಶಿಷ್ಯರ ಸಂಬಂಧವೂ ಬದಲಾಗುತ್ತಿರುತ್ತದೆ. ಹಿಂದಿನ ಕಾಲದಲ್ಲಿದ್ದ ಗುರುಕುಲ ಪದ್ಧತಿ ನಿರ್ನಾಮವಾಗಿದೆ. ಹಿಂದಿನ ಕಾಲದಲ್ಲಿ ಇದ್ದಂತಹ ಭಯ ಭಕ್ತಿ, ಪ್ರೀತಿ, ಗೌರವಗಳು ಕೇವಲ ಹೊರಜಗತ್ತಿಗೆ ತೋರಿಸುವ ಡಾಂಭಿಕತೆಯ ವಸ್ತುವಾಗಿ ಪರಿವರ್ತನೆಯಾಗಿದೆ. ಈ ನಿಟ್ಟಿನಲ್ಲಿ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಮಾಜ ತಮ್ಮನ್ನು ತಾವು ಪುನರ್ವಿಮರ್ಶಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಶಿಕ್ಷಕರ ದಿನಾಚರಣೆ ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗಿ ಉಳಿಯಬಾರದು. ಶಿಕ್ಷಣದ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಂಡು ಗುರು ಶಿಷ್ಯರ ಸಂಬಂಧವನ್ನು ಪುನರ್‌ ಪ್ರತಿಷ್ಠಾಪಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸಂಜುಕುಮಾರ, ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಕುಮಾರ್, ವಿಶ್ವನಾಥ್, ಚಂದ್ರಕಾಂತ, ಮಾರುತಿ, ಭೀಮರಾವ, ಶ್ರಾವಣಕುಮಾರ ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!