ಉದಯವಾಹಿನಿ, ಚಿಕ್ಕಮಗಳೂರು: ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಳೆದ 2 ದಿನಗಳಿಂದ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ( ಕಾಣಿಸಿಕೊಂಡಿದೆ. ಪರಿಣಾಮ ಅಪರೂಪದ ಅರಣ್ಯ ಸಂಪತ್ತು, ಜೀವ ಸಂಕುಲಕ್ಕೆ ಸಂಚಕಾರ ಎದುರಾಗಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಕಾಡ್ಗಿಚ್ಚು ಹಬ್ಬಿರೋದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಮುತ್ತೋಡಿ ಅರಣ್ಯ ವ್ಯಾಪ್ತಿಯ ಎಮ್ರಹಳ್ಳಿ ಮತ್ತು ಹೊಸಕಾನ್ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡದೆ. ಬಿಸಿಲ ಬೇಗೆಗೆ ಒಣಗಿದ ತರಗೆಲೆಗಳು ಮತ್ತು ಹುಲ್ಲಿನಿಂದಾಗಿ ಕ್ಷಣಾರ್ಧದಲ್ಲೇ ಕಿಲೋ ಮೀಟರ್‌ಗಳಷ್ಟು ದೂರ ಬೆಂಕಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಅಭಯಾರಣ್ಯದಲ್ಲಿನ ಜೀವಸಂಕುಲಕ್ಕೂ ಸಂಚಕಾರ ಎದುರಾಗಿದೆ. ಕಾಡಿಗೆ ಬೆಂಕಿ ಬೀಳುತ್ತಿದ್ದಂತೆ ಪ್ರಾಣಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಾಡಂಚಿನ ಗ್ರಾಮ ಹಾಗೂ ತೋಟಗಳಿಗೆ ಓಡಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ವಾಚರ್‌ಗಳ ಕೊರತೆ ಇರುವುದರಿಂದ ಬೆಂಕಿಯನ್ನು ನಿಯಂತ್ರಿಸಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೇಸಿಗೆಯಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯ ಇಲಾಖೆ ಫೈರ್ ಲೈನ್‌ಗಳನ್ನು ಮಾಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
