
ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.23ರ ವರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಸಂಬಂಧಪಟ್ಟ ಇಲಾಖೆಗಳಿಗೆ ಜಾನುವಾರಗಳ ಜಾತ್ರೆ, ಸಂತೆ ನಿಷೇಧ ಆದೇಶ ಹೊರಡಿಸಿ ಸೂಚಿಸಿದ್ದರು. ನಿಷೇಧದ ಮಧ್ಯೆ ಜಾನುವಾರಗಳ ಸಂತೆ ಪ್ರತಿ ವಾರದಂತೆ ನಡೆದಿರುವುದು ಅಧಿಕಾರಿಗಳ ನಿರ್ಲಕ್ಷ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಾಣಿಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೆ-21ರಿಂದ ಅ-23ರವರೆಗೆ ಜಿಲ್ಲೆಯಾದ್ಯಂತ ಕುರಿ ಮೇಕೆ ಹೊರತುಪಡಿಸಿ ಜಾನುವಾರಗಳ ಸಂತೆ, ಜಾತ್ರೆ ನಿಷೇಧಿಸಲಾಗಿದೆ ಈ ಕುರಿತು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಸಂಬಂಧಪಟ್ಟ ಇಲಾಖೆ ಆದೇಶ ಹೊರಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಪ್ರತಿ ಸೋಮವಾರ ಪಟ್ಟಣದಲ್ಲಿ ಜಾನುವಾರಗಳ ಸಂತೆ ನಡೆಯುತ್ತಿದ್ದು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಬೆಳಗ್ಗೆಯಿಂದಲೇ ರೈತರು ತಂಡೋಪ ತಂಡವಾಗಿ ಸಂತೆಯ ಕಡೆಗೆ ಬರುತ್ತಿದ್ದರು ಅಧಿಕಾರಿಗಳು ತಡೆಯದೆ ನಿರ್ಲಕ್ಷ ವಹಿಸಿದ ಕಾರಣ ಜಾನುವಾರಗಳ ಸಂತೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ತಹಶೀಲ್ದಾರ್ ಅವರ ಗಮನಕ್ಕೆ ತಂದಾಗ ಸ್ಥಳೀಯ ಪಿಎಸ್ಐ ಹಾಗೂ ಪ. ಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ತಿಳಿಹೇಳಿ ಜಾನುವಾರ ಸಂತೆ ನಿಷೇಧ ಮಾಡಲಾಯಿತು ಎಂದು ತಿಳಿಸಿದರು.
