ಉದಯವಾಹಿನಿ, ಮಾನವನ ದೇಹವು ಶೇಕಡಾ 70ರಷ್ಟು ನೀರಿನಿಂದ ಕೂಡಿದೆ. ಪ್ರತಿನಿತ್ಯ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ, ಕೆಲವು ಜನರು ವಿವಿಧ ಹಣ್ಣು ಮತ್ತು ಆಹಾರಗಳನ್ನು ತಿಂದ ತಕ್ಷಣ ನೀರು ಕುಡಿಯುತ್ತಾರೆ. ಕೆಲವು ಆಹಾರಗಳನ್ನು ಸೇವಿಸಿದರ ಬಳಿಕ ನೀರು ಕುಡಿದರೆ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಈ ರೀತಿಯ ಕೆಲವು ಸಮಸ್ಯೆಗಳನ್ನು ತಡೆಯಲು ಯಾವ ಹಣ್ಣು ಮತ್ತು ಆಹಾರಗಳನ್ನು ಸೇವಿಸಿದ ನಂತರ ನೀರು ಕುಡಿಯಬಾರದು ಎಂಬುದರ ಬಗ್ಗೆ ತಜ್ಞರು ತಿಳಿಸುವಂತಹ ಸಲಹೆಗಳ ಬಗ್ಗೆ ವಿವರವಾಗಿ ತಿಳಿಯೋಣ.
ಪಪ್ಪಾಯಿ: ಪಪ್ಪಾಯಿ ಹಣ್ಣಿನಲ್ಲಿ ವಿವಿಧ ಪೋಷಕಾಂಶಗಳು ಸೇರಿವೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ವಿಟಮಿನ್ ಎ, ಸಿ, ಫೈಬರ್ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
ಫೋಲೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಇತರ ಪ್ರಯೋಜನಕಾರಿ ಸಂಯುಕ್ತಗಳನ್ನು ಇದರಲ್ಲಿ ಸೇರಿವೆ. ಪ್ಲೇಟ್‌ಲೆಟ್ಸ್ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಿಂದ ಪಪ್ಪಾಯಿ ತಿಂದ ಬಳಿಕ ನೀರು ಕುಡಿಯಬಾರದು. ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಪಪ್ಪಾಯಿಯಲ್ಲಿರುವ ಫೈಬರ್ ಮತ್ತು ಕಿಣ್ವಗಳು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು ಹಾಗೂ ಉಬ್ಬುವುದು, ಗ್ಯಾಸ್ ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಹೀಗಾಗಿ ಕನಿಷ್ಠ 30 ರಿಂದ 40 ನಿಮಿಷಗಳ ಬಳಿಕ ಬಾಯಾರಿಕೆಯಾದರೆ, ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯುವುದು ಸೂಕ್ತ ಎಂದು ತಜ್ಞರು ತಿಳಿಸುತ್ತಾರೆ.

ಬಾಳೆಹಣ್ಣು: ಬಾಳೆಹಣ್ಣು ಪೋಷಕಾಂಶಗಳ ಕಣಜವಾಗಿದೆ. ಜೀರ್ಣಕ್ರಿಯೆಗೆ, ರಕ್ತದೊತ್ತಡ ನಿಯಂತ್ರಣಕ್ಕೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮೂಳೆಗಳ ಬಲವರ್ಧನೆಗೆ ಹಾಗೂ ಉತ್ತಮ ನಿದ್ರೆಗೆ ಹೆಚ್ಚು ಸಹಕಾರಿಯಾಗಿದೆ. ಬಾಳೆಹಣ್ಣಿನಲ್ಲಿ ನಾರಿನಂಶ, ವಿಟಮಿನ್ ಬಿ6 ಮತ್ತು ಪೊಟ್ಯಾಶಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿವೆ. ಕಫದ ಸಮಸ್ಯೆ ಇರುವವರು ರಾತ್ರಿ ಬಾಳೆಹಣ್ಣು ಸೇವಿಸುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿನ ಜೀರ್ಣಕಾರಿ ಕಿಣ್ವಗಳು ದುರ್ಬಲಗೊಳ್ಳುತ್ತದೆ. ಜೊತೆಗೆ ಜೀರ್ಣಕ್ರಿಯೆ ಪ್ರಕ್ರಿಯೆಯು ತುಂಬಾ ನಿಧಾನವಾಗುತ್ತದೆ. ಬಾಳೆಹಣ್ಣು ಸೇವಿಸಿದ ಬಳಿಕ ಕನಿಷ್ಠ 30 ನಿಮಿಷಗಳ ಬಳಿಕ ನೀರು ಕುಡಿಯಬಹುದು ಎನ್ನುತ್ತಾರೆ ತಜ್ಞರು.

Leave a Reply

Your email address will not be published. Required fields are marked *

error: Content is protected !!