
ಉದಯವಾಹಿನಿ ಕೋಲಾರ :– ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಬಿಡುಗಡೆ ಸೇರಿದಂತೆ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸರಕಾರ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ ಪ್ರತಿಭಟನೆ ನಡೆಸಿದರು.
*ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಜ್ ಮಾತನಾಡಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಕಾನೂನು ಪ್ರಕಾರ ಪ್ರತಿವರ್ಷ ನೀಡಬೇಕಾದ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಿಲ್ಲ 2021 ರಲ್ಲಿ ಒಂದೂವರೆ ಲಕ್ಷ ಜನ ಫಲಾನುಭವಿಗಳಿಗೆ ಸಹಾಯಧನ ಬಾಕಿ ಉಳಿಸಿಕೊಳ್ಳಲಾಗಿದೆ. ೨೦೨೩ – ೨೪ ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ, ಅರ್ಧ ವರ್ಷ ಕಳೆಯುತ್ತಿದ್ದರೂ ಈವರೆಗೂ ಸಹಾಯಧನಕ್ಕಾಗಿ ಅರ್ಜಿಯನ್ನೇ ಆಹ್ವಾನಿಸಿಲ್ಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ, ಸೇವಾ ಷರತ್ತುಗಳ ಅಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆಯಡಿ ಶೈಕ್ಷಣಿಕ ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು.*
ಕಟ್ಟಡ ಕಾರ್ಮಿಕರು ನೋಂದಾಯಿತರಾಗಿದ್ದವರು ಶೈಕ್ಷಣಿಕ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲವಾಗಿದೆ. ಶೈಕ್ಷಣಿಕ ಸಹಾಯಧವನ್ನು ನಿಲ್ಲಿಸಿರುವುದರಿಂದ ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸಾಧ್ಯತೆಯೂ ಇದೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಕ್ಕೆ ಕಲ್ಯಾಣ ಮಂಡಳಿಯೇ ಅವಕಾಶ ಮಾಡಿಕೊಡುವುದು ಸರಿಯಲ್ಲ ಕೂಡಲೇ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಬೇಕು ಎಂದರು.
*ಈ ಸಂದರ್ಭದಲ್ಲಿ ಸಂಘಟನೆಯ ಕೇಂದ್ರ ಕಾರ್ಯಕಾರಣಿ ಸಮಿತಿ ಸದಸ್ಯೆ ಆಶಾ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವರಾಂ ಹೆಬ್ಬಾರ್ ಕಾರ್ಮಿಕ ಸಚಿವರಾಗಿದ್ದಾಗಿನ ಸಂದರ್ಭದಲ್ಲಿ ರೇಷನ್ ಕಿಟ್, ಬೂಸ್ಟರ್ ಕಿಟ್, ವಿವಿಧ ಟ್ರೇಡ್‌ವಾರು ಟೂಲ್ ಕಿಟ್‌ಗಳು, ಸೇಫ್ಟಿ ಕಿಟ್, ಕಲಿಕಾ ಕಿಟ್, ಲ್ಯಾಪ್‌ಟಾಪ್, ಟ್ಯಾಬ್, ಇನ್ನೋವಾ ಕಾರುಗಳು, ಟಿ.ವಿ.ಗಳು, ಕಂಪ್ಯೂಟರ್‌ಗಳು ಇತ್ಯಾದಿಯಾಗಿ ಬೇಕಾಬಿಟ್ಟಿ ಖರೀದಿಸಲಾಯಿತು. ತೀರ ಕಳಪೆ ಗುಣಮಟ್ಟದ, ಬಳಕೆಗೆ ಯೋಗ್ಯವಲ್ಲದ ಕಿಟ್‌ಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಲಾಯಿತು. ಇಂತಹ ಯಾವುದನ್ನೂ ಕಾರ್ಮಿಕರು ಕೇಳಿರಲಿಲ್ಲ. ಕಾರ್ಮಿಕರು ಕೇಳದಿದ್ದರೂ ಬಲವಂತವಾಗಿ ನೀಡಲಾಯಿತು. ಜತೆಗೆ ಕಚೇರಿಯನ್ನು ಐಷಾರಾಮಿಯಾಗಿ ವಿನ್ಯಾಸಗೊಳಿಸಲು ಹತ್ತಾರು ಕೋಟಿ ರೂಪಾಯಿ ವ್ಯಯಿಸಲಾಯಿತು. ಹೀಗೆ ನಿಯಮಾವಳಿಗಳನ್ನು ಮೀರಿ ನೀರಿನಂತೆ ಖರ್ಚು ಮಾಡಿ, ಈಗ ಶೈಕ್ಷಣಿಕ ಸಹಾಯಧನ ನೀಡಲು ಹಣವಿಲ್ಲ ಎಂದರೆ ಹೇಗೆ ಹಾಗೊಂದು ವೇಳೆ ಸಹಾಯಧನ ಬಿಡುಗಡೆ ಮಾಡಲು ಹಣವಿಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಪಡೆದು ಸಹಾಯಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.*
ಕಟ್ಟಡ ಕಾರ್ಮಿಕರ ಮದುವೆ, ಪಿಂಚಣಿ, ವೈದ್ಯಕೀಯ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಸಲ್ಲಿಸಿದ ನೂರಾರು ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಇವೆ. ಈ ಬಾಕಿ ಅರ್ಜಿಗಳನ್ನು ಪುರಸ್ಕರಿಸಿ, ಹಣ ಪಾವತಿ ಮಾಡಬೇಕು ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಯಾವುದೇ ವಿಧವಾದ ಖರೀದಿಗಳನ್ನು ನಿಲ್ಲಿಸಬೇಕು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಎಲ್ಲ ಖರೀದಿ ವ್ಯವಹಾರಗಳನ್ನು ತನಿಖೆಗೆ ಆದೇಶಿಸಬೇಕು ಭ್ರಷ್ಟಾಚಾರದಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ವಿಜಯಕೃಷ್ಣ, ಹೊಗರಿ ನಾಗರಾಜಪ್ಪ, ಹೊನ್ನೇನಹಳ್ಳಿ ರಾಮಚಂದ್ರಪ್ಪ, ರಾಮಾಂಜಿ, ನಾರಾಯಣಪ್ಪ, ಮಂಜುನಾಥ್, ರಾಜೇಶ್, ಉಮೇಶ್, ನಾಗೇಶ್, ನಾಗಮಣಿ, ಶಾರದ, ಮುನಿರಾಜ್, ಸುನೀತಾ, ನೂರ್ ಜಹರ, ಮುನಿಲಕ್ಷ್ಮಮ್ಮ, ಮುಂತಾದವರು ವಹಿಸಿದ್ದರು
