
ಉದಯವಾಹಿನಿ, ದೇವರಹಿಪ್ಪರಗಿ: ಗಾಂಧೀಜಿ, ಶಾಸ್ತ್ರೀಜಿ ಮಹನೀಯರ ದೇಶಪ್ರೇಮ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಸತ್ಯಸಂಧತೆ, ಜೀವನಾದರ್ಶಗಳು ದೇಶದ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಹಾಗೂ ಕರ್ತವ್ಯ ಮಾರ್ಗದಲ್ಲಿ ನಡೆಯಲು ದಾರಿದೀಪವಾಗಿದೆ ಎಂದು ತಹಶೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಹನೀಯರು ಜಯಂತಿ ಪ್ರಯುಕ್ತ “ಸ್ವಚ್ಛತೆಗಾಗಿ ಕಲೆ” ವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ಜನ್ಮದಿನವನ್ನು ಇಡೀ ವಿಶ್ವವೇ ಆಚರಿಸುತ್ತಿದೆ. ಅಹಿಂತಾ ತತ್ವ, ಮಾನವತಾವಾದ, ಆದರ್ಶ ಬದುಕಿನ ಮೂಲಕ ಶಾಂತಿಧೂತನಾಗಿ ವಿಶ್ವದ ಮನಗೆದ್ದಿದ್ದಾರೆ. ಶಾಸ್ತ್ರೀಜಿಯವರು ದೇಶದ ಪ್ರಧಾನಿಯಂತಹ ಅತ್ಯುನ್ನತ ಅಧಿಕಾರವಿದ್ದರೂ ಯಾವುದಕ್ಕೂ ಆಸೆಪಡದ ಸತ್ಯ, ಪರಿಶುದ್ಧ, ಕಳಂಕರಹಿತ ಆಡಳಿತ ನಡೆಸಿದ ಧೀಮಂತ ವ್ಯಕ್ತಿಯಾಗಿ ಭಾರತವನ್ನು ಸಶಕ್ತ, ಸಧೃಢ ರಾಷ್ಟ್ರ ಕಟ್ಟುವಲ್ಲಿ ಶ್ರಮಿಸಿದ್ದಾರೆ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಟ್ಟಣದ ಜಡಿಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ,ಗಾಂಧೀಜಿ, ಶಾಸ್ತ್ರೀಜಿ ಅವರ ಬದುಕು ಸರ್ವಕಾಲಕ್ಕೂ ಆದರ್ಶನೀಯವಾದುದು ಎಂದರು.ರಂಗೋಲಿ ಸ್ಪರ್ಧೆ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದ್ದು ವಿಶೇಷವಾಗಿತ್ತು.ಇದೇ ಸಂದರ್ಭದಲ್ಲಿ ಪ ಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಸದಸ್ಯರುಗಳಾದ ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ, ವಿನೋದ ಚವ್ಹಾಣ, ಪ್ರಕಾಶ ಮಲ್ಹಾರಿ, ಕಾಸಿನಾಥ ತಳಕೇರಿ,ಪ ಪಂ ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಸೇರಿದಂತೆ ಸದಸ್ಯರು ,ಪಟ್ಟಣದ ಪ್ರಮುಖರು,ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
