
ಉದಯವಾಹಿನಿ, ಮಸ್ಕಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಅಶೋಕವೃತ್ತದವರೆಗೆ ಕೈಗೊಂಡಿರುವ ಡಿವೈಡರ್ ಕಾಮಗಾರಿ ಕಳಪೆಯಾಗಿದ್ದು, ಕಾಮಗಾರಿಯನ್ನು ತೆರವುಗೊಳಿಸಿ ವಾರದೊಳಗೆ ಗುಣಮಟ್ಟದ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸಿ ಇಲ್ಲಿನ ಪ್ರಗತಿಪರ ಸಂಘಟನೆ ಮುಖಂಡರು ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಾಯಕ ಕಾರ್ಯಪಾಲಕ ಅಭಿಯಂತರರು ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ಮನವಿ ಸಲ್ಲಿಸಿದರು, ಬಳಿಕ ಪ್ರಗತಿಪರ ಸಂಘಟನೆ ಮುಖಂಡ ಅಶೋಕ ಮುರಾರಿ ಅವರು ಮಾತನಾಡಿ, ಅಂದಾಜು ಪ್ರತಿ ನಿಯಮವನ್ನು ಗಾಳಿಗೆ ತೂರಿ ಡಿವೈಡರ್ ಕಾಮಗಾರಿಯಲ್ಲಿ ಕಳಪೆ ಮಟ್ಟದ ಸಿಮೆಂಟ್ ಮತ್ತು ಅಗತ್ಯ ಪ್ರಮಾಣದ ಕಬ್ಬಿಣದ ಸರಕುಗಳನ್ನು ಕಾಮಗಾರಿಯಲ್ಲಿ ಬಳಕೆ ಮಾಡಿರುವುದರಿಂದ ಕಾಮಗಾರಿ ಆರಂಭದ ಹಂತದಲ್ಲೆ ಬಿರುಕುಗಳು ಕಾಣಿಸಿಕೊಂಡಿದ್ದು, ಚರಂಡಿ ನಿರ್ಮಿಸಿದ ನಂತರ ಸರಿಯಾಗಿ ಕ್ಯೂರಿಂಗ್ ಮಾಡುತ್ತಿಲ್ಲ, ಇದರಿಂದ ಚರಂಡಿ ಕಾಮಗಾರಿ ಹೆಚ್ಚಿನ ದಿನ ಬಾಳಿಕೆ ಬರುವುದಿಲ್ಲ, ಕಾಮಗಾರಿಯನ್ನು ಗಮನಿಸಿ ಸಾರ್ವಜನಿಕರು ಕಾಮಗಾರಿ ತಡೆಹಿಡಿದಿದ್ದಾರೆ ಅದರು ಸಹ ಅಧಿಕಾರಿಗಳು ಕ್ರಮ ತಗೆದುಕೊಳ್ಳುತ್ತಿಲ್ಲ, ಕಳಪೆ ಕಾಮಗಾರಿ ಕೈಗೊಂಡು ಜನರ ತೆರಿಗೆ ಹಣ ಪೋಲು ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ ವಾರದೊಳಗೆ ಗುಣಮಟ್ಟದ ಕಾಮಗಾರಿ ಆರಂಭಿಸದಿದ್ದರೆ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆ ಮುಖಂಡ ಕಿರಣ ಮುರಾರಿ, ಆರ್.ಕೆ ನಾಯಕ,ವಿಜಯಕುಮಾರ ಬಡಿಗೇರ್, ಬಸವರಾಜ ಉದ್ಬಾಳ, ಮಲ್ಲಿಕ್ ಕೋಠಾರಿ,ಸಿದ್ದು ಮುರಾರಿ ಭಾಗಿಯಾಗಿದ್ದರು.
