
ಉದಯ ವಾಹಿನಿ ಪಾವಗಡ: ಕೇಂದ್ರ ಅಧ್ಯಯನ ತಂಡ ಬರ ವೀಕ್ಷಣೆಗೆ ಶುಕ್ರವಾರ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಶಿರಾ ತಾಲ್ಲೂಕುಗಳಿಗೆ ಮಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪಾವಗಡ ತಾಲ್ಲೂಕಿಗೆ ಅಧ್ಯಯನ ತಂಡ ಬಾರದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕು, ಬರದ ನಾಡು ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಪಾವಗಡ ತಾಲ್ಲೂಕಿನಲ್ಲಿ ಭೀಕರ ಬರಗಾಲ ಕಾಡುತ್ತಿದ್ದು ಆದ್ರೂ ಕೇಂದ್ರದ ವೀಕ್ಷಣೆ ತಂಡ ಭೇಟಿ ನೀಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಾಲ್ಲೂಕಿನ ಯುವಕರು ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.ಸಚಿವರು, ಪ್ರಭಾವಿಗಳ ಕ್ಷೇತ್ರಗಳಿಗಷ್ಟೇ ಕೇಂದ್ರದ ತಂಡ ಭೇಟಿ ಕೇವಲ 3 ತಾಲ್ಲೂಕುಗಳಿಗೆ ಸೀಮಿತನಾ ಅಂತ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕಾಂಗ್ರೆಸ್ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರ ಫೋಟೋ ಹಾಕಿ ಜಿಲ್ಲೆಯಲ್ಲಿ ನಿಮ್ಮ ತಾಲ್ಲೂಕುಗಳಲ್ಲಿ ಮಾತ್ರ ಅಷ್ಟೇ ಅಲ್ಲ ನಿಮ್ಮ ಪಕ್ಕದ ಪಾವಗಡದಲ್ಲಿ ನಿಮ್ಮ ತಾಲ್ಲೂಕುಗಳಿಗಿಂತ ಹೆಚ್ಚು ಬರ ಇದೆ. ಕೇಂದ್ರ ತಂಡವನ್ನು ನಮ್ಮ ತಾಲ್ಲೂಕಿಗೂ ಕಳುಹಿಸಿ ಎಂದು ವೈರಲ್ ಮಾಡುತ್ತಿದ್ದಾರೆ.
ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಕೇಂದ್ರ ಬರ ಅಧ್ಯಯನ ತಂಡ ಪಾವಗಡ ಭೇಟಿಯನ್ನು ರದ್ದು ಮಾಡಲಾಗಿದೆ ಎಂದು ವ್ಯಂಗ್ಯ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
