ಉದಯವಾಹಿನಿ, ಬೆಂಗಳೂರು: ವಿರಾಟ್ ಕೊಹ್ಲಿ ಮೊದಲ ಬಾರಿಗೆ ಬೆಂಗಳೂರಿನ ಹೊರವಲಯದಲ್ಲಿ ಬಿಸಿಸಿಐ ನಿರ್ಮಾಣ ಮಾಡಿರುವ ಸೆಂಟರ್ ಆಫ್ ಎಕ್ಸೆಲೆನ್ಸ್ ಮೈದಾನದಲ್ಲಿ ದೆಹಲಿ ಪರ ನಾಳೆ ಕಣಕ್ಕೆ ಇಳಿಯಲಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ವಿಜಯ್ ಹಜಾರೆ ಟೂರ್ನಿಯ ಪಂದ್ಯಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಇರುವ ಸೆಂಟರ್ ಆಫ್ ಎಕ್ಸೆಲೆನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುಮತಿ ಇಲ್ಲ.
40 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿರುವ ಸೆಂಟರ್ ಆಫ್ ಎಕ್ಸೆಲೆನ್ಸ್ ನಲ್ಲಿ ಮೂರು ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಆಯೋಜಿಸಲು ಐಸಿಸಿಯ ನಿಯಮಗಳ ಪ್ರಕಾರ ಈ ಮೈದಾನವನ್ನು ನಿರ್ಮಿಸಲಾಗಿದೆ. 2024 ರಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿಯಾಗಿದ್ದ ಜಯ್ ಶಾ ಸೆಂಟರ್ ಆಫ್ ಎಕ್ಸೆಲೆನ್ಸ್ ಕ್ಯಾಂಪಸ್ ಅನ್ನು ಉದ್ಘಾಟಿಸಿದ್ದರು. ಪಂದ್ಯ ನಡೆಸುವ ಸಂಬಂಧ ಸೋಮವಾರ ಬೆಂಗಳೂರು ಆಯುಕ್ತ ಸೀಮಂತ್ ಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದ ಅಧಿಕಾರಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ಬಳಿಕ ಈ ತಂಡ ಸರ್ಕಾರಕ್ಕೆ ವರದಿ ನೀಡಿತ್ತು. ಅಂತಿಮವಾಗಿ ಬೆಂಗಳೂರು ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದಾರೆ.
ಸ್ಟೇಡಿಯಂನಲ್ಲಿ ಇನ್ನಷ್ಟು ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಬಂದಿದೆ. ಜೊತೆಗೆ ನಾಳೆ ಮ್ಯಾಚ್‌ಗೆ ವಿರಾಟ್ ಕೊಹ್ಲಿ ಆಗಮಿಸುವುದರಿಂದ ಹೊರಭಾಗದಲ್ಲಿ ಅಭಿಮಾನಿಗಳು ಸೇರುವ ಆತಂಕ ವ್ಯಕ್ತವಾಗಿದೆ.
