ಉದಯವಾಹಿನಿ ಪಾವಗಡ: ಇತ್ತೀಚೆಗೆ ರಾಜ್ಯ ಸರ್ಕಾರ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದು ಹಲವಾರು ಸರ್ಕಾರಿ ಯೋಜನೆಗಳು ಸ್ಥಳೀಯ ಸಂಸ್ಥೆಗಳಾದ ಗ್ರಾ.ಪಂ.ಮಟ್ಟದಲ್ಲೇ ಜಾರಿಗೆ ತರುವ ಕಾರ್ಯ ಮಾಡಬೇಕಾಗಿದೆ. ಆದರೆ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ.ತಾಲ್ಲೂಕಿನ ಒಟ್ಟು ೩೪ ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ ೧೯ ಮಂದಿ ಪಿಡಿಒಗಳು ಮತ್ತು ಗ್ರೇಡ್-೧ ಕಾರ್ಯದರ್ಶಿಗಳು ೦೭ ಜನ ಇದ್ದು ಅದರಲ್ಲಿ ೦೫ ಮಂದಿ ಪ್ರಭಾರ ಪಿಡಿಒಗಳಾಗಿ ಹಾಗೂ ಗ್ರೇಡ್-೨ ಕಾರ್ಯದರ್ಶಿಗಳು ೧೦ ಜನರ ಪೈಕಿ ಒಬ್ಬರು ಪ್ರಭಾರ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ.ಒಬ್ಬ ಪಿಡಿಒಗೆ ಎರಡು-ಮೂರು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ನೀಡಲಾಗಿದ್ದು ಒಂದು ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಬೇರೊಂದು ಪಂಚಾಯಿತಿಯಲ್ಲಿ ಇರುವುದಾಗಿ ಸಬೂಬು ಉತ್ತರ ನೀಡುತ್ತಾ ಪಟ್ಟಣದಲ್ಲಿಯೇ ಟಿಕಾಣಿ ಹೂಡಿರುತ್ತಾರೆ. ಅವರಿಗೆ ಬೇಕಾದವರನ್ನು ಪಟ್ಟಣಕ್ಕೆ ಕರೆಸಿಕೊಂಡು ಖಾಸಗಿ ಸ್ಥಳದಲ್ಲಿ ಕೆಲಸ ಮಾಡಿಕೊಡುತ್ತಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ಕೆಲವು ಗ್ರಾ.ಪಂ.ಗಳಲ್ಲಿ ಕಾರ್ಯದರ್ಶಿಗಳೇ ಪಿಡಿಒಗಳಾಗಿದ್ದು ಇವರು ಆಡಿದ್ದೇ ಆಟ ಎನ್ನುವಂತಾಗಿದೆ. ಇನ್ನು ಕೆಲವೆಡೆ ಅನಧಿಕೃತವಾಗಿ ಕರ ವಸೂಲಿಗಾರರನ್ನು ಹಾಗೂ ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಂಪ್ಯೂಟರ್ ಆಪರೇಟರ್‌ಗಳಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ.ಪಿಡಿಒ ಸೇರಿ ಯಾವುದೇ ಪಂಚಾಯಿತಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳನ್ನು ಹುಡುಕಿಕೊಂಡು ತಾಲ್ಲೂಕು ಕೇಂದ್ರವಾದ ಪಾವಗಡ ಪಟ್ಟಣದ ಬೀದಿ ಬೀದಿ ಅಲೆದಾಡುವಂತಾಗಿದೆ.ಅವರಿಗೆ ಇಲಾಖೆಯಿಂದ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಒಮ್ಮೊಮ್ಮೆ ನಾಟ್ ರೀಚೆಬಲ್, ಸ್ವಿಚ್‌ಆಫ್ ಇರುತ್ತದೆ. ಬೇರೆ ದಾರಿ ಇಲ್ಲದೆ ಗ್ರಾಮೀಣ ಜನರು ಅಧಿಕಾರಿಗಳನ್ನು ಹುಡುಕಿಕೊಂಡು ತಾಲ್ಲೂಕು ಪಂಚಾಯಿತಿ ಕಛೇರಿಗೆ ಬಂದು ಕಾಯುತ್ತಾರೆ. ಇಲ್ಲವೇ ಅವರು ಇರಬಹುದಾದ ಸ್ಥಳಗಳ ಮಾಹಿತಿ ಪಡೆದು ಹುಡುಕುತ್ತಾ ಅಲೆದಾಡಿ ಕೊನೆಗೆ ಕೈಗೆ ಸಿಗದಿದ್ದಾಗ ಬಂದ ದಾರಿಗೆ ಸುಂಕವಿಲ್ಲದ0ತೆ ಸಂಜೆ ತಮ್ಮ ಗ್ರಾಮದ ಕಡೆ ಮುಖ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ನಿಯಮಗಳಿಗೆ ಬೆಲೆಯೇ ಇಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಅಧಿಕಾರಿಗಳು ಕಛೇರಿಯಲ್ಲಿರಬೇಕು. ಇಲ್ಲವೇ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಬೇಕು. ಅಧಿಕಾರಿಗಳು ಕಛೇರಿಯಲ್ಲಿ ಸಿಗುವುದೇ ಅಪರೂಪವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನು ಮುಂದಾದರೂ ಮೇಲಾಧಿಕಾರಿಗಳು ಸೂಕ್ತ ಕ್ರಮ ವಹಿಸಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಕೆಲಸ ಮಾಡಿಸುವರೇ? ತಾಲ್ಲೂಕಿನ ಜನತೆ ಕಾದುನೋಡಬೇಕಾಗಿದೆ.
ತಾಲ್ಲೂಕಿನಲ್ಲಿ ಒಟ್ಟು ೩೪ ಗ್ರಾ.ಪಂ.ಗಳಿದ್ದು ೧೯ ಮಂದಿ ಪಿಡಿಒಗಳಿದ್ದಾರೆ. ಪಿಡಿಒಗಳ ಕೊರತೆಯಿಂದ ಗ್ರೇಡ್-೧ ಮತ್ತು ಗ್ರೇಡ್-೨ ಕಾರ್ಯದರ್ಶಿಗಳಿಗೆ ಪ್ರಭಾರ ನೀಡಲಾಗಿದೆ. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಪರಿಶೀಲಿಸಿ ಪಿಡಿಒಗಳ ಸಭೆ ಕರೆದು ಯಾವುದೇ ತೊಂದರೆಯಾಗದ0ತೆ ಕಾರ್ಯನಿರ್ವಹಿಸಲು ಸೂಚಿಸಲಾಗುವುದು: ಕೆ.ಒ.ಜಾನಕಿರಾಮ್ ಕಾರ್ಯನಿರ್ವಹಣಾಧಿಕಾರಿ ಪಾವಗಡ
