
ಉದಯವಾಹಿನಿ ಶಿಡ್ಲಘಟ್ಟ: ನಗರದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ನಡೆಸಿದ ದಾಳಿಯ ವೇಳೆ ಇಬ್ಬರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಶಿಡ್ಲಘಟ್ಟ ನಗರದ ಗಾರ್ಡನ್ ರಸ್ತೆಯಲ್ಲಿರುವ ಸಂತೆ ಬೀದಿಯಲ್ಲಿ ಇಂಜಿನಿಯರಿಂಗ್ ವರ್ಕ್ ಶಾಪ್ ನಲ್ಲಿ ಕೆಲಸಮಾಡುತ್ತಿದ್ದ ಸುಮಾರು ೧೩ ವರ್ಷದ ಬಾಲಕ, ಮತ್ತು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ೧೫ ವರ್ಷದ ಬಾಲಕನನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.ಬಾಲ ಕಾರ್ಮಿಕ ದಾಳಿಯ ಸಂದರ್ಭದಲ್ಲಿ ಇಬ್ಬರು ಬಾಲ ಕಾರ್ಮಿಕರು ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು,ಕೂಡಲೆ ಸ್ಥಳ ಪರಿಶೀಲಿಸಿ ಇಬ್ಬರು ಬಾಲಕಾರ್ಮಿಕರನ್ನು ವಶಕ್ಕೆ ಪಡೆಯಲಾಗಿದೆ. ಬಾಲಕಾರ್ಮಿಕರು ಸುಮಾರು ಒಂದು ತಿಂಗಳಿನಿಂದ ಶಾಲೆಗೆ ಹೋಗದೆ ಕೆಲಸಕ್ಕೆ ಹೋಗುತ್ತಿದ್ದರು.ಅವರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಕಾರ್ಮಿಕ ನೀರಿಕ್ಷಕಿ ವಿಜಯಲಕ್ಷ್ಮಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಮೇಶ್,ಮಕ್ಕಳ ಘಟಕದ ಅರುಣ, ಸುಷ್ಮಾ, ಮಕ್ಕಳ ಸಹಾಯವಾಣಿ ವೆಂಕಟೇಶ್, ರೋಜಾ,ಲಕ್ಷ್ಮಿ,ಶಾಲಿನಿ,ಚಂದ್ರಕಲಾ, ಪೊಲೀಸ್ ಇಲಾಖೆಯ ಲಕ್ಷ್ಮೀನಾರಾಯಣ ದಾಳಿಯಲ್ಲಿ ಪಾಲ್ಗೊಂಡಿದ್ದರು.
