ಉದಯವಾಹಿನಿ, ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಇರಾನ್ ಸೇನೆ ದಾಳಿ ನಡೆಸಿರುವುದನ್ನು ಭಾರತ ಖಂಡಿಸಿದೆ.ಇಸ್ರೇಲ್ ಹಾಗೂ ಅಮೆರಿಕ ಪಡೆಗಳು, ಇರಾನ್ ವಿರುದ್ಧ ಫೆಬ್ರುವರಿ 28ರಂದು ಜಂಟಿಯಾಗಿ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದೆ.
ಥಾಯ್ಲೆಂಡ್ ಧ್ವಜ ಹೊಂದಿದ್ದ ಹಾಗೂ ಭಾರತಕ್ಕೆ ಸರಕು ಹೊತ್ತು ತರುತ್ತಿದ್ದ, ‘ಮಯೂರಿ ನಾರಿ’ ಹೆಸರಿನ ಹಡಗಿನ ಮೇಲೆ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿ ಮಾಡಿದೆ. ಈ ವೇಳೆ, ಇಬ್ಬರು ಭಾರತೀಯ ನಾವಿಕರು ಮೃತಪಟ್ಟಿದ್ದು, ಮತ್ತೊಬ್ಬರಿಗಾಗಿ ಶೋಧ ನಡೆಯುತ್ತಿದೆ. ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.
ಥಾಯ್ ಕಂಪನಿಯಾದ ‘ಪ್ರೀಷಿಯಸ್ ಶಿಪ್ಪಿಂಗ್ ಪಿಸಿಎಲ್’ ಒಡೆತನದ ಈ ಹಡಗು ಯುಎಇಯ ಖಲೀಫಾ ಬಂದರಿನಿಂದ ಗುಜರಾತಿನ ಕಾಂಡ್ಲಾ ಬಂದರಿನೆಡೆಗೆ ಹೊರಟಿತ್ತು.
ಇದಲ್ಲದೆ, ಪರ್ಷಿಯನ್ ಕೊಲ್ಲಿಯಲ್ಲಿ ಮೂರು ಹಡಗುಗಳ ಮೇಲೆ ಬುಧವಾರ ದಾಳಿಯಾಗಿದೆ.
ಭಾರತದ ನಾವಿಕರು ಮೃತಪಟ್ಟಿರುವುದನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಖಚಿತಪಡಿಸಿದ್ದಾರೆ.
‘ಸಂಘರ್ಷದ ಆರಂಭಿಕ ಹಂತದಲ್ಲಿ ನಡೆದ ಇಂತಹ ಹಲವು ದಾಳಿಗಳ ಸಂದರ್ಭದಲ್ಲಿ ಭಾರತೀಯ ನಾಗರಿಕರೂ ಸೇರಿದಂತೆ ಸಾಕಷ್ಟು ಅಮೂಲ್ಯ ಜೀವಗಳು ಈಗಾಗಲೇ ಮೃತಪಟ್ಟಿವೆ. ದಾಳಿಯ ತೀವ್ರತೆಯು ಹೆಚ್ಚುತ್ತಿದ್ದು, ಮತ್ತಷ್ಟು ಮಾರಕವಾಗುವ ಸಾಧ್ಯತೆ ಇದೆ’ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡುವ ಮೂಲಕ ಅಮಾಯಕ ಸಿಬ್ಬಂದಿಗೆ ಅಪಾಯವನ್ನುಂಟು ಮಾಡುವುದು, ಸಂಚಾರಕ್ಕೆ ತೊಡಕಾಗುವುದು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
