ಉದಯವಾಹಿನಿ, ಟೆಲ್ ಅವೀವ್ : ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದ ಹಮಾಸ್ ಉಗ್ರರ ಹೇಡಿತನ ಸಾವಿರಾರು ಮಂದಿ ಪಾಲ್ಗೊಂಡಿದ್ದ ಟೆಕ್ನೋ ಸಂಗೀತೋತ್ಸವದ ಮೇಲೂ ಬಿದ್ದಿದೆ. ಗಾಜಾ ಸಮೀಪದ ಮರುಭೂಮಿಯಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ದಾಳಿ ನಡೆದ ಸ್ಥಳದಿಂದ ಝಾಕಾ ಪರಿಹಾರ ಕಾರ್ಯಾಚರಣೆ ತಂಡ ೨೬೦ಕ್ಕೂ ಹೆಚ್ಚು ಶವಗಳನ್ನು ಹೊರತೆಗೆದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಟ್ರೈಬ್ ಆಫ್ ನೋವಾ, ಮ್ಯಾರಥಾನ್ ಟ್ರಾನ್ಸ್ ಮ್ಯೂಸಿಕ್ ಫೆಸ್ಟಿವಲ್ ಮುಕ್ತಾಯಕ್ಕೆ ಇನ್ನೇನು ಕೆಲವೇ ಗಂಟೆಗಳ ಬಾಕಿ ಉಳಿದಿದ್ದ ವೇಳೆ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಸ್ಥಳೀಯ ಕಾಲಮಾನ ಮುಂಜಾನೆ ೬:೦೦ ಗಂಟೆಗೆ ಹಮಾಸ್ ಉಗ್ರಗಾಮಿಗಳು ಸಂಗತೀ ಕಾರ್ಯಕ್ರಮ ನಡೆಯುತ್ತಿದ್ದ ಗುಂಪಿನೊಳಗೆ ನುಗ್ಗಿದರು. ಈ ವೇಳೆ ಉತ್ಸವದಿಂದ ನಾಗರಿಕರು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಂತೆ ಉಗ್ರರು ಭೀಕರ ಗುಂಡಿನ ದಾಳಿ ಆರಂಭಿಸಿದ್ದಾರೆ. ಅಲ್ಲದೆ ಈ ವೇಳೆ ಯುವತಿಯರು ಸೇರಿದಂತೆ ಅನೇಕರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದಾರೆ. ದಾಳಿಯ ಹಲವು ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರಿಸ್ಥಿತಿಯ ಭೀಕರತೆಯನ್ನು ಬಿಂಬಿಸುತ್ತಿವೆ. ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಇಸ್ರೇಲಿ ವಿದ್ಯಾರ್ಥಿನಿಯೊಬ್ಬಳನ್ನು ಹಮಾಸ್ ಹೋರಾಟಗಾರರ ತಂಡ ಅಪಹರಿಸಿದ್ದು, ೩೦ ಮಂದಿ ತಮ್ಮ ವಶದಲ್ಲಿದ್ದಾರೆ ಎಂದು ಈ ಗುಂಪು ಹೇಳಿದೆ. ಹಮಾಸ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಸೇನಾ ನೆರವನ್ನು ಇಸ್ರೇಲ್‌ಗೆ ಒದಗಿಸಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಈಗಾಗಲೇ ಇಸ್ರೇಲ್ ೭೦೦ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದರೆ ಗಾಜಾ ಪಟ್ಟಿಯಲ್ಲಿ ೪೦೦ಕ್ಕೂ ಅಧಿಕ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಮುಂದಿನ ಕೆಲಗಂಟೆಗಳಲ್ಲಿ ಯುದ್ದದ ಪರಿಣಾಮ ಮತ್ತಷ್ಟು ತೀವ್ರಗೊಳ್ಳಲಿದೆ ಎನ್ನಲಾಗಿದೆ.
