ಉದಯವಾಹಿನಿ, ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಜೆಪಿ ಪಾರ್ಕಿನಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಪುತ್ಥಳಿಯನ್ನೇ ತೆರವುಗೊಳಿಸಿ, ಬೃಹತ್ ಗೋಪುರ ಗಡಿಯಾರ ನಿರ್ಮಿಸುತ್ತಿರುವುದನ್ನು ಖಂಡಿಸಿ ಜನತಾ ಪಕ್ಷ ಕರ್ನಾಟಕ ಸಮಿತಿ ಪ್ರತಿಭಟನೆ ನಡೆಸಿತು.
ನಗರದಲ್ಲಿಂದು ಇಲ್ಲಿನ ಶೇಷಾದ್ರಿಂಪುರನಿಂದ ಜೆಪಿ ಪಾರ್ಕ್ ವರೆಗೂ ಬೈಕ್ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ಜನತಾ ಪಕ್ಷ ಕರ್ನಾಟಕ ಸಮಿತಿಯ ನೂರಾರು ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜೆಪಿ ಪಾರ್ಕಿನಲ್ಲಿ ನಡೆಯುತ್ತಿರುವ ಬೃಹತ್ ಗೋಪುರ ಗಡಿಯಾರ ನಿರ್ಮಾಣ ಕಾಮಗಾರಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಚಿಂತನೆಯ ಮುತ್ಸದ್ದಿ ಲೋಕನಾಯಕ ಜಯಪ್ರಕಾಶ್ ನಾರಾಯಣರದ್ದು ಪ್ರಮುಖವಾದ ಹೆಸರು.
ಕುಖ್ಯಾತ ಚಂಬಲ್ ಡಕಾಯಿತರನ್ನು ಶರಣಾಗತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಜೆ.ಪಿಯವರ ಪಾತ್ರವನ್ನು ಮರೆಯಲಾಗದು ಎಂದರು.
ಇಂತಹ ಧೀಮಂತ ನಾಯಕ ದಿವಂಗತ ಜಯಪ್ರಕಾಶ್ ನಾರಾಯಣ್ ಅವರಿಗೂ, ನಮ್ಮ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಹೀಗಾಗಿ, ಲೋಕನಾಯಕನಿಗೆ ಗೌರವ ಸಲ್ಲಿಸುವ ಸಂಕೇತವಾಗಿ ೧೯೮೭ರಲ್ಲಿ ಜನತಾಪಕ್ಷ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜಧಾನಿ ಬೆಂಗಳೂರಿನ ಜೆ.ಪಿ.ಪಾರ್ಕ್ ನಿರ್ಮಾಣಕ್ಕಾಗಿ ಅವಕಾಶ ಕಲ್ಪಿಸಿದರು ಎಂದು ಹೇಳಿದರು.
ಆದರೆ, ಈಗ ಪಾರ್ಕ್ ನಿರ್ಮಾಣಗೊಂಡಾಗಿನಿಂದ ಇದ್ದಂತಹ ಸಮಾಜವಾದಿ ಸಿದ್ಧಾಂತದ ಜೆ.ಪಿ.ಯವರ ಮತ್ಥಳಿಯನ್ನು ಕೆಲವು ಸಂಕುಚಿತ ಮನೋಭಾವದ ಪಟ್ಟಭದ್ರ ಹಿತಾಸಕ್ತರು ಇದ್ದಕ್ಕಿದ್ದಂತೆ ತೆರವುಗೊಳಿಸಿರುವುದು ಆಘಾತಕಾರಿ ಘಟನೆಯಾಗಿದೆ.ಈ ಜಾಗದಲ್ಲಿ ಒಂದು ಬೃಹತ್ ಗೋಪುರ ಗಡಿಯಾರವನ್ನು ಸ್ಥಾಪಿಸುವ ಕಾಮಗಾರಿ ಚಾಲ್ತಿಯಲ್ಲಿದೆ. ಇದು ಅನಗತ್ಯ ಹಣವ್ಯಯಿಸಿ ಬೃಹತ್ ಗೋಪುರ ಗಡಿಯಾರ ನಿರ್ಮಿಸುವಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ದೂರಿದರು.
