ಉದಯವಾಹಿನಿ, ಹುಬ್ಬಳ್ಳಿ,: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ನಗರದ ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮನ ಪ್ರತಿಮೆಗೆ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಾಲಾರ್ಪಣೆ ಮಾಡಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಆಯಾ ಜಿಲ್ಲಾ ಮಟ್ಟದಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹಕ್ಕೊತ್ತಾಯ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಈ ಹೋರಾಟ ನಡೆಯಲಿದೆ. ಸಮಾಜದ ಬೇಡಿಕೆ ಈಡೇರುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಮೀಸಲಾತಿ ಪಡೆದೆ ತೀರುತ್ತೇವೆ ಎಂದು ಸಮಾಜ ನಿರ್ಧರಿಸಿದೆ. ಹಿಂದಿನ ಸರಕಾರ ಜಾರಿಗೆ ತಂದಿರುವ ಮೀಸಲಾತಿ ಅನುಷ್ಠಾನ ಆಗಿಲ್ಲ. ಈ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮುಗಿಯುವುದರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಲೋಕಸಭಾ ಚುನಾವಣೆಯೊಳಗೆ ಮೀಸಲಾತಿ ಕೊಟ್ಟು ಸಮಾಜದ ಋಣ ತೀರಿಸುತ್ತಾರೆ ಎಂಬ ವಿಶ್ವಾಸ ಸರ್ಕಾರದ ಮೇಲಿದೆ. ಸಮಾಜಕ್ಕೆ ಯಾರು ಮೀಸಲಾತಿ ನೀಡುತ್ತಾರೋ ಅವರನ್ನು ಗೆಲ್ಲಿಸುತ್ತೇವೆ. ಮೀಸಲಾತಿ ನೀಡದೇ ಇರುವರ ವಿರುದ್ಧ ಅಸಮಾಧಾನಗೊಳ್ಳುವುದು ನಮಗೆ ಗೊತ್ತಿದೆ ಎಂದರು.
ಈ ವೇಳೆ ಕುಂದಗೋಳ ಶಾಸಕರಾದ ಎಂ.ಆರ್.ಪಾಟೀಲ ಅವರು ನಗರದ ಕಿತ್ತೂರು ಚನ್ನಮ್ಮ ಪ್ರತಿಮೆ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಲ್ಲಿಂದ ಬಂಕಾಪುರ ಚೌಕ್ ವರೆಗೆ ಬೈಕ್ ರ್ಯಾಲಿ, ನಂತರ ಗಬ್ಬೂರು ವೃತ್ತದವರೆಗೂ ಪಾದಯಾತ್ರೆ ಮೂಲಕ ಗಬ್ಬೂರ ರಾಷ್ಟ್ರೀಯ ಹೆದ್ದಾರಿಯವರೆಗೆ ಪಾದಯಾತ್ರೆ ನಡೆಸಿ, ಧಾರವಾಡ ಜಿಲ್ಲಾ ಮಟ್ಟದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯೊಂದಿಗೆ ರಸ್ತೆ ತಡೆ ನಡೆಸಿ ಮೀಸಲಾತಿಗಾಗಿ ಒತ್ತಾಯಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು. ಸಮಾಜದ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಡಿ.ಡಿ.ದ್ಯಾವನಗೌಡ್ರ, ದೀಪಾ ಗೌರಿ, ವಿರೇಶ್ ಉಂಡಿ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.
