ಉದಯವಾಹಿನಿ,ಕೊಟ್ಟಾಯಂ (ಕೇರಳ) : ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಯಾತ್ರಿಕರ ಬಸ್ ಅಪಘಾತಕ್ಕೀಡಾಗಿ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಕೊಟ್ಟಾಯಂನಲ್ಲಿ ನಡೆದಿದೆ. 40 ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ಇಲ್ಲಿನ ಎರುಮೇಲಿ ಸಮೀಪದ ಕನಮಾಲ ಬಳಿ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಶಬರಿಮಲೆ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಕೋಲಾರದಿಂದ ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್ ಕೊಟ್ಟಾಯಂನ ಎರಿಮೇಲಿ ಬಳಿ ಅಪಘಾತಕ್ಕೀಡಾಗಿದೆ ಎಂದು ತಿಳಿಸಿದ್ದಾರೆ. ಈ ಯಾತ್ರಾರ್ಥಿಗಳು ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಅಪಘಾತಕ್ಕೆ ಒಳಗಾಗಿದೆ. ಬಸ್ನಲ್ಲಿ 40 ಯಾತ್ರಾರ್ಥಿಗಳು ಸೇರಿ ಒಟ್ಟು 43 ಮಂದಿ ಇದ್ದರು. 13ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.ಗಾಯಾಳುಗಳಲ್ಲಿ ನಾಲ್ವರನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಮತ್ತೆ ನಾಲ್ವರನ್ನು ಇಲ್ಲಿನ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಇಲ್ಲಿ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ಎರುಮೇಲಿ-ಶಬರಿಮಲ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರವನ್ನು ಪುನಃಸ್ಥಾಪಿಸಲು ಸ್ಥಳೀಯ ಆಡಳಿತ ಹಾಗೂ ಟ್ರಾಫಿಕ್ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು, ಭಕ್ತರು ತೊಂದರೆಗೆ ಒಳಗಾದರು.
ಪ್ರಾಥಮಿಕ ವರದಿಗಳ ಪ್ರಕಾರ ಬಸ್ ಚಾಲಕ ನಿರಂತರವಾಗಿ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೋಟಾರು ವಾಹನ ಇಲಾಖೆ ವಾಹನವನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸುವ ಸಂಭವವಿದೆ.
