
ಉದಯವಾಹಿನಿ, ಪಶ್ಚಿಮ ಏಷ್ಯಾದಲ್ಲಿ ಇರಾನ್ ಯುದ್ಧವು ತೀವ್ರಗೊಳ್ಳುತ್ತಿದ್ದಂತೆ, ಭಾರತದ ಇಂಧನ ಅವಲಂಬನೆಯ ವಾಸ್ತವವು ತೆರೆದುಕೊಂಡಿದೆ. ಭಾರತವು ತನ್ನ ಕಚ್ಚಾ ತೈಲದ ಶೇಕಡಾ 90ರಷ್ಟು ಮತ್ತು ಎಲ್‌ಪಿಜಿಯ (LPG) ಶೇಕಡಾ 60ರಷ್ಟು ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತಿದೆ. ಇರಾನ್‌ನ ಹೊರ್ಮುಜ್ ಜಲಸಂಧಿಯ ಸ್ಥಗಿತವು ಪೂರೈಕೆ ಸರಪಳಿಗೆ ಹೊಡೆತ ನೀಡಿದ್ದರೂ, ಭಾರತವು ಕಳೆದ ಹತ್ತು ವರ್ಷಗಳಿಂದ ವ್ಯವಸ್ಥಿತವಾಗಿ ನಿರ್ಮಿಸಿಕೊಂಡಿರುವ ‘ರಹಸ್ಯ ಭೂಗತ ತೈಲ ಶೇಖರಣಾ ಗುಹೆಗಳು ಮತ್ತು ಪೂರೈಕೆ ಮೂಲಗಳ ವೈವಿಧ್ಯೀಕರಣವು ದೇಶವನ್ನು ಆತಂಕದಿಂದ ಪಾರು ಮಾಡಿದೆ.
ಭಾರತದ ಭೂಗತ ತೈಲ ಸಂಗ್ರಹಾಗಾರಗಳು:
ಭಾರತವು ತುರ್ತು ಪರಿಸ್ಥಿತಿಗಾಗಿ ಮೂರು ಆಯಕಟ್ಟಿನ ಸ್ಥಳಗಳಲ್ಲಿ ಭೂಗತ ಕಚ್ಚಾ ತೈಲ ಶೇಖರಣಾ ವ್ಯವಸ್ಥೆಯನ್ನು ಹೊಂದಿದೆ:
ವಿಶಾಖಪಟ್ಟಣಂ (ಆಂಧ್ರ ಪ್ರದೇಶ)
ಮಂಗಳೂರು (ಕರ್ನಾಟಕ)
ಪಾದೂರು (ಕರ್ನಾಟಕ)
ಈ ಬೃಹತ್ ಗುಹೆಗಳು ಒಟ್ಟು 5.33 ಮಿಲಿಯನ್ ಮೆಟ್ರಿಕ್ ಟನ್ (ಸುಮಾರು 40 ಮಿಲಿಯನ್ ಬ್ಯಾರೆಲ್) ಕಚ್ಚಾ ತೈಲವನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿವೆ. ಇದು ದೇಶದ ಸುಮಾರು 10 ದಿನಗಳ ಅಗತ್ಯವನ್ನು ಪೂರೈಸಬಲ್ಲದು. ಈ ಭೂಗತ ಕೇಂದ್ರಗಳು ವೈಮಾನಿಕ ದಾಳಿ, ಡ್ರೋನ್ ಸ್ಟ್ರೈಕ್ ಅಥವಾ ನೈಸರ್ಗಿಕ ವಿಕೋಪಗಳಿಂದ ಸುರಕ್ಷಿತವಾಗಿವೆ. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ವಿಶಾಖಪಟ್ಟಣಂನಲ್ಲಿ ಎಲ್‌ಪಿಜಿ ಶೇಖರಣೆಗಾಗಿ ಪ್ರತ್ಯೇಕ ಭೂಗತ ಗುಹೆಗಳಿದ್ದು, ಮಂಗಳೂರಿನಲ್ಲಿ 80,000 ಟನ್ ಸಾಮರ್ಥ್ಯದ ದೇಶದ ಅತಿದೊಡ್ಡ ಎಲ್‌ಪಿಜಿ ಶೇಖರಣಾ ಕೇಂದ್ರವಿದೆ.
