
ಉದಯವಾಹಿನಿ: ಭಾರತ ಮತ್ತು ಬಾಂಗ್ಲಾದೇಶ (IND vs BAN) ನಡುವಿನ ವಿಶ್ವಕಪ್ 2023ರ (World Cup 2023) 17ನೇ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ಭರ್ಜರಿಯಾಗಿ ಗೆದ್ದುಬೀಗಿದೆ. ಈ ಮೂಲಕ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ. ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿತು.ಟೀಂ ಇಂಡಿಯಾ ಕರಾರುವಕ್ಕು ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು ನಿಗದಿಯ 50 ಓವರ್‌ಗೆ 8 ವಿಕೆಟ್ ಕಳೆದುಕೊಂಡು 256 ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ 257 ರನ್ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ರೋಹಿತ್ ಪಡೆ ಆರಂಭದಲ್ಲಿಯೇ ಅಬ್ಬರಿಸಲು ಆರಂಭಿಸಿತು. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್ 2023ರಲ್ಲಿ ಸತತ 4ನೇ ಗೆಲುವನ್ನು ದಾಖಲಿಸಿತು. ಅಂತಿಮವಾಗಿ ಭಾರತ ತಂಡ 41.3 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಅಲ್ಲದೇ ಅಂತಿಮವಾಗಿ ಭರ್ಜರಿ ಶತಕದ ಮೂಲಕ ಕಿಂಗ್ ಕೊಹ್ಲಿ ಮಿಂಚಿದರು.
ಅಬ್ಬರಿಸಿದ ಕಿಂಗ್ ಕೊಹ್ಲಿ:ಇನ್ನು, ಬಾಂಗ್ಲಾದೇಶ ನೀಡಿದ 257 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿಯೇ ಭರ್ಜರಿ ಓಫನಿಂಗ್ ದೊರಕಿತು. ಈ ಮೂಲಕ ತಂಡ ಗೆಲುವಿನ ಹಾದಿ ಸುಗಮವಾಯಿತು. ಆರಂಭದಲ್ಲಿಯೇ ಶುಭ್‌ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಈ ವೇಳೆ ರೋಹಿತ್ 48 ರನ್, ಶುಭ್‌ಮನ್ ಗಿಲ್ 53 ರನ್ ಹಾಗೂ ಶ್ರೇಯಸ್ ಅಯ್ಯರ್ 19 ರನ್ ಸಿಡಿಸಿದರು.
ಆಟದ ವೇಳೆಯೇ ಗಾಯಗೊಂಡ ಹಾರ್ದಿಕ್ ಪಾಂಡ್ಯ:ಬಾಂಗ್ಲಾದೇಶ ವಿರುದ್ಧದ ಪಂದ್ಯದ ನಡುವೆ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿತು. ಆಲ್ ರೌಂಡರ್ ಹಾಗೂ ವೇಗದ ಬೌಲರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ವೇಳೆ ಗಾಯಗೊಂಡಿದ್ದಾರೆ. ಬೆನ್ನುನೋವಿನಿಂದಾಗಿ ಪಾಂಡ್ಯ ತಂಡದಿಂದ ಬಹಳ ಕಾಲ ಹೊರಗುಳಿದಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಕೆಲಸದ ಹೊರೆ ನಿರ್ವಹಣೆಯಿಂದಾಗಿ ಅವರು ಇನ್ನೂ ಟೆಸ್ಟ್ ಕ್ರಿಕೆಟ್ ಆಡುತ್ತಿಲ್ಲ. ಇದರ ನಡುವೆ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.
ಬೌಲಿಂಗ್‌ನಲ್ಲಿ ಜಡ್ಡು-ಯಾದವ್ ಮಿಂಚಿಂಗ್:ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಭಾರತೀಯರು ಬಾಂಗ್ಲಾದೇಶ ವಿರುದ್ಧ ಉತ್ತಮ ದಾಳಿ ನಡೆಸಿದರು. ಭಾರತದ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್, ಶಾರ್ದೂಲ್ ಠಾಕೂರ್ 1 ವಿಕೆಟ್, ಕುಲ್‌ದೀಪ್ ಯಾದವ್ 1 ವಿಕೆಟ್, ರವೀಂದ್ರ ಜಡೇಜಾ 2 ವಿಕೆಟ್ ಮತ್ತು ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದು ಮಿಂಚಿದರು. ಇದರ ನಡುವೆ ಗಾಯದಿಂದ ಹೊರನಡೆದ ಹಾರ್ದಿಕ್ ಪಾಂಡ್ಯ ಅವರ ಓವರ್‌ನ್ನು ವಿರಾಟ್ ಕೊಹ್ಲಿ ಬೌಲ್ ಮಾಡಿದರು. ಕೊಹ್ಲಿ ಕೇವಲ 3 ಬಾಲ್ ಮಾಡುವ ಮೂಲಕ ಪಾಂಡ್ಯ ಅವರ ಓವರ್ ಅಂತ್ಯಗೊಳಿಸಿದರು.
ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಬಾಂಗ್ಲಾ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಉತ್ತಮ ಆರಂಭ ಪಡೆದರೂ ಬಳಿಕ ಭಾರತೀಯ ಬೌಲಿಂಗ್ ದಾಳಿಗೆ ಬಿಗ್ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಬಾಂಗ್ಲಾ ಪರ ಲಿಟ್ಟನ್ ದಾಸ್ 66 ರನ್, ತಂಝಿದ್ ಹಸನ್ 51 ರನ್, ನಜ್ಮುಲ್ ಹೊಸೈನ್ ಶಾಂಟೊ 8 ರನ್, ಮೆಹಿದಿ ಹಸನ್ ಮಿರಾಜ್ 3 ರನ್, ತೌಹಿದ್ ಹೃದೋಯ್ 16 ರನ್, ಮುಶ್ಫಿಕರ್ ರಹೀಮ್ 38 ರನ್, ನಸುಮ್ ಅಹ್ಮದ್ 14 ರನ್ ಮತ್ತು ಮಹಮ್ಮದುಲ್ಲಾ 46 ರನ್ ಸಿಡಿಸದರು.
