ಉದಯವಾಹಿನಿ ಪಾವಗಡ: ರೊಪ್ಪ ಗ್ರಾ.ಪಂ. ಪಿಡಿಒ ವಿಜಯ್ ಕುಮಾರ್ ಅಧ್ಯಕ್ಷರ ಪರನಿಂತು ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾ.ಪಂ.ಸದಸ್ಯ ಜಿ.ಎನ್.ಹನುಮಂತರಾಯಪ್ಪ ಆರೋಪಿಸಿದ್ದಾರೆ.ರೊಪ್ಪ ಗ್ರಾ.ಪಂ.ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಗೆ ನಾನು ಸೇರಿದಂತೆ 6 ಜನ ಸದಸ್ಯರು ಸ್ವಲ್ಪ ತಡವಾಗಿ ಸಭೆಗೆ ಹಾಜರಾಗಲು ಹೋಗುವಷ್ಟರಲ್ಲಿ ಕೇವಲ 6 ಜನ ಸದಸ್ಯರೊಂದಿಗೆ ಸಭೆ ಮುಕ್ತಾಯಗೊಳಿಸಿ ಹೊರ ನಡೆಯುತ್ತಿದ್ದಾಗ ಪಿಡಿಒರನ್ನು ಪ್ರಶ್ನಿಸಿದಾಗ ಉಢಾಪೆ ಉತ್ತರ ನೀಡಿ ನಿರ್ಗಮಿಸಿದ್ದಾರೆ.
ಸಾಮಾನ್ಯ ಸಭೆಯಲ್ಲಿ 09 ವಿಷಯಗಳು ಚರ್ಚಿಸಲು ಅಧ್ಯಕ್ಷರಿಂದ ಅನುಮೋದನೆಗೊಂಡಿದ್ದು, ಇವುಗಳನ್ನು ಕೇವಲ 5 ನಿಮಿಷದಲ್ಲಿಯೇ ಅನುಮೋದಿಸಿ ಸಭೆ ಮುಕ್ತಾಯಗೊಳಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇದು ಪೂರ್ವಯೋಜಿತ ಕಾರ್ಯಕ್ರಮವಾಗಿದ್ದು ಬುಧವಾರ ರಾತ್ರಿ ಪಿಡಿಒ ಮತ್ತು ಕೆಲ ಸದಸ್ಯರು ಖಾಸಗಿ ಸ್ಥಳವೊಂದರಲ್ಲಿ ಸಾಮಾನ್ಯ ಸಭೆಯಲ್ಲಿ ಏನು ಮಾಡಬೇಕು ಎಂದು ತೀರ್ಮಾನಿಸಿಕೊಂಡು ಬಂದು ಅದರಂತೆ ಸಭೆಯನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.ರೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಬಹುತೇಕ ಯೋಜನೆಗಳಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿದ್ದು ಇದನ್ನು ಮುಚ್ಚಿ ಹಾಕಲು ಕೇವಲ ಐದು ನಿಮಿಷಗಳಲ್ಲಿ ಸಭೆಯನ್ನು ಮುಕ್ತಾಯಗೊಳಿಸಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ದೌಡಾಯಿಸಿದ್ದಾರೆ.ನಮ್ಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಖಾಸಗಿ ವ್ಯಕ್ತಿಯೊಬ್ಬರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು. ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಪಿಡಿಒ ವಿಜಯ್ ಕುಮಾರ್, ನಾನು 11 ಗಂಟೆಗೆ ಸಭೆಗೆ ಬರುವಂತೆ ಎಲ್ಲಾ ಸದಸ್ಯರಿಗೂ ಅಂಚೆ ಮೂಲಕ ಸಭೆಯ ಕರೆಯೋಲೆಯನ್ನು ಕಳುಹಿಸಲಾಗಿತ್ತು ಮತ್ತು ದೂರವಾಣಿ ಕರೆ ಮಾಡಿ ತಿಳಿಸಿರುತ್ತೇನೆ. ಆದರೂ ಕೆಲ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಸ್ವಲ್ಪ ಸಮಯ ಕಾದುನೋಡಿದರೂ ಸಭೆಗೆ ಹಾಜರಾಗಿರುವುದಿಲ್ಲವಾದ್ದರಿಂದ ಅಧ್ಯಕ್ಷರ ಅಪ್ಪಣೆ ಮೇರೆಗೆ ಅಜೆಂಡಾದಲ್ಲಿರುವ ಅಂಶಗಳನ್ನು ಚರ್ಚಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಈ ಕೆಲ ಸದಸ್ಯರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವು. ನಾನು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿರುತ್ತೇನೆ ಎಂದರು.
