ಉದಯವಾಹಿನಿ, ಮಂಡ್ಯ: ನಗರದ ವಿವಿಧೆಡೆ ಸರಗಳ್ಳರ ಭಯದಲ್ಲಿ ಓಡಾಡುತ್ತಿದ್ದ ಮಹಿಳೆಯರು ಇದೀಗ ಬೀದಿ ಕಾಮಣ್ಣರ ಕಿಡಿಗೇಡಿ ಕೃತ್ಯಗಳನ್ನು ಎದುರಿಸಬೇಕಾಗಿದೆ. ಬೈಕ್‌ನಲ್ಲಿ ಬರುವ ಕಿಡಿಗೇಡಿಗಳು ಒಬ್ಬಂಟಿಯಾಗಿ ಓಡಾಡುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅನೇಕ ಪ್ರಕರಣಗಳು ಹಲವೆಡೆ ವರದಿಯಾಗಿವೆ.ಹೊರವಲಯದಲ್ಲಿರುವ ಬಡಾವಣೆಗಳಲ್ಲಿ ಸರಗಳ್ಳತನ ಸಾಮಾನ್ಯವಾಗಿದ್ದು, ಮಹಿಳೆಯರು ಭಯದಿಂದಲೇ ಓಡಾಡುತ್ತಿದ್ದಾರೆ. ಬಹುತೇಕ ಮಹಿಳೆಯರು ಮನೆಯಿಂದ ಹೊರಗೆ ಬರುವಾಗ ಮಾಂಗಲ್ಯ ಸರವನ್ನು ಬಿಚ್ಚಿಟ್ಟು ಬರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಈಗ ಹೊಸದೊಂದು ಸವಾಲು ಎದುರಿಸಬೇಕಾಗಿದೆ.
ಬೀದಿ ಕಾಮಣ್ಣರು ಮಹಿಳೆಯರನ್ನು ಕೈ ಹಿಡಿದು ಎಳೆಯುವ, ಹಿಂಬದಿಯಿಂದ ಹೊಡೆಯುವ, ಮಹಿಳೆಯರ ಮೈ ಸ್ಪರ್ಶಿಸುವ, ಬಟ್ಟೆ ಎಳೆಯುವ ಘಟನೆಗಳು ನಡೆದಿದ್ದು, ಕಾಮಣ್ಣರ ಕೃತ್ಯಗಳಿಗೆ ಮಹಿಳೆಯರು ಹೈರಾಣಾಗಿದ್ದಾರೆ. ಈ ಪುಂಡರ ಉಪಟಳದಿಂದಾಗಿ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಒಬ್ಬರನ್ನೇ ಕಳುಹಿಸಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
