ಉದಯವಾಹಿನಿ, ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಸಿಮೆಂಟ್ ತುಂಬಿದ ಟ್ಯಾಂಕರ್ ಹಾಗೂ ಆಟೋ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.ಸಾವನ್ನಪ್ಪಿದವರನ್ನು ನಜ್ಮಾ ಬೇಗಂ (28), ಬಿಬಿ ಫಾತೀಮಾ (12) , ಅಬುಬಕರ್ (4) ಬಿಬಿ ಮರಿಯಮ್ಮ (5 ತಿಂಗಳು), ಮಹ್ಮದ್ ಪಾಶಾ (20), ಆಟೋ ಚಾಲಕ ಬಾಬಾ (35) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆಂದು ಗುರುತಿಸಲಾಗಿದೆ.ಈ ಅಪಘಾತದಲ್ಲಿ ಮಹಮದ್ ಹುಸೇನ್ ಎಂಬ ಬಾಲಕನಿಗೆ ಗಂಭಿರ ಗಾಯಗೊಂಡಿದ್ದಾರೆ.ಆಟೋದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಚಿತ್ತಾಪುರಕ್ಕೆ ಹೋಗಿದ್ದರು. ವಾಪಸ್ಸು ಕುಟುಂಬ ಸಮೇತ ಊರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಿಮೆಂಟ್ ಕಾರ್ಖಾನೆಯ ಹಾರೂಬೂದಿ ತುಂಬಿದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಇಡೀ ಆಟೋ ನುಜ್ಜುಬಗುಜ್ಜಾಗಿ ರಸ್ತೆಯಲ್ಲಿ ನೂರಾರು ಮೀಟರ್ ಎಳೆದೊಯ್ದಿದೆ. ಇದರಿಂದಾಗಿ ಸ್ಥಳದಲ್ಲಿ ಶವಗಳುಕೂಡ ಅಪ್ಪಚ್ಚಿಯಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಭೀಕರ ದೃಶ್ಯ ಜನರನ್ನು ದಂಗು ಬಡಿಸುವಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲಾಗುತ್ತಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಅಡೂರು ಶ್ರೀನಿವಾಸಲು, ಡಿವೈಎಸ್ ಪಿ, ಸಿಪಿಐ ಹಾಗೂ ಪಿಎಸ್‌ಐ ತಿರುಮಲೇಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಸ್ತೆಯಲ್ಲಿನ ಶವಗಳನ್ನು ತೆಗೆಯವ ಕಾರ್ಯ ನಡೆದಿದೆ. ಅಪಘಾತದಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
