
ಉದಯವಾಹಿನಿ ಯಾದಗಿರಿ: ರಾಜ್ಯದಲ್ಲಿರುವ ಐತಿಹಾಸಿಕ ಹಾಗೂ ಪಾರಂಪರಿಕ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ರಾಜ್ಯ ಸರ್ಕಾರವು ದತ್ತು ನೀಡುವಂತಹ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕಾನೂನು, ನ್ಯಾಯ,ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ,ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಖಾತೆ ಸಚಿವರಾದ ಎಚ್.ಕೆ .ಪಾಟೀಲ್ ಅವರು ಹೇಳಿದರು.
ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿನ ದೇವಾಲಯಗಳ ಸಮುಚ್ಛಯಕ್ಕೆ ಭೇಟಿ ನೀಡಿ, “ನಮ್ಮ ಸ್ಮಾರಕ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಐತಿಹಾಸಿಕ ಹಾಗೂ ಪಾರಂಪರಿಕ ಮತ್ತು ಸಾಂಸ್ಕೃತಿಕ ಕುರುಹುಗಳು ರಾಜ್ಯಾದ್ಯಂತ ಇದ್ದು, ಸುಮಾರು ಒಂದು ಸಾವಿರ ಇಂತಹ ಸ್ಮಾರಕಗಳನ್ನು ಗುರುತಿಸಲಾಗಿದ್ದು, ಮುಂದಿನ ಪೀಳಿಗೆ ಹಾಗೂ ಜನಾಂಗಕ್ಕೆ ಪರಿಚಯಿಸುವ ದಿಶೆಯಲ್ಲಿ ಸ್ಮಾರಕಗಳನ್ನು ದತ್ತು ನೀಡಿ ಅವುಗಳ ಪುನಃ ಶ್ಚೇತನ ಮತ್ತು ಸಂರಕ್ಷಣೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು, ಉಳ್ಳವರು , ದಾನಿಗಳು ಸೇರಿದಂತೆ ಹೃದಯ ವೈಶಾಲ್ಯತೆ ಇರುವವರಿಂದ ಇಂತಹ ಸ್ಮಾರಕಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ದತ್ತು ನೀಡಿ ಸಂರಕ್ಷಿಸಲು ಗಮನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸರಕಾರದ ಜೊತೆಗೆ ಆಯಾ ಐತಿಹಾಸಿಕ ತಾಣಗಳನ್ನು ಮತ್ತು ಸ್ಮಾರಕಗಳನ್ನು ಹೊಂದಿರುವಂತಹ ಗ್ರಾಮಗಳ ಗ್ರಾಮಸ್ಥರು ಕೂಡ ಕೈಜೋಡಿಸುವ ಕಾರ್ಯ ಮಾಡಬೇಕು. ಹಿರಿಯರು ನೀಡಿದ ಕೊಡುಗೆಗಳು ಇವಾಗಿದ್ದು, ನಾವೆಲ್ಲರೂ ವಾರಸುದಾರರಾಗಿ ಇಂತಹ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಗಮನ ನೀಡುವ ಅವಶ್ಯಕತೆ ಇದೆ ಇಂತಹ ಸ್ಮಾರಕಗಳ ಬಗ್ಗೆ ಗೌರವ ಅಭಿಮಾನ ವನ್ನು ಹೊಂದಬೇಕು. ವಿಶೇಷವಾಗಿ ಈ ಸ್ಮಾರಕಗಳ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವುದು ಮುಖ್ಯವಾಗಿದೆ. ಈ ದಿಶೆಯಲ್ಲಿ ಜಿಲ್ಲೆಯಲ್ಲಿರುವ ಸ್ಮಾರಕಗಳ ಬಗ್ಗೆ ಎಲ್ಲರೂ ವಿಶೇಷ ಗಮನ ನೀಡಬೇಕು.
ಅದರಂತೆ ಶಹಾಪುರ ತಾಲೂಕಿನಲ್ಲಿ ವಿಶೇಷವಾಗಿ ಶಿರವಾಳದಲ್ಲಿ ಸುಮಾರು 360 ಸ್ಮಾರಕಗಳು, ಸಾವಿರಾರು ಲಿಂಗಗಳು, ಗುಡಿ ಗುಂಡಾರಗಳು ಇರುವ ಬಗ್ಗೆ ತಿಳಿದು ಬಂದಿದೆ. ‘ದಕ್ಷಿಣದ ಕಾಶಿ’ ಎಂದೆ ಪ್ರಖ್ಯಾತ ಹೊಂದಿರುವ ಇಲ್ಲಿನ ಗುಡಿ ದೇವಸ್ಥಾನಗಳು ಮತ್ತು ಇತರೆ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸುವ ಜೊತೆಗೆ ಪುನಶ್ಚೇತನ ಮಾಡುವ ಅಗತ್ಯವಿದೆ. ಈ ದಿಶೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದಿಂದಲೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಗ್ರಾಮಸ್ಥರು ಕೂಡ ಸರ್ಕಾರದೊಂದಿಗೆ ಕೈಜೋಡಿಸುವಂತೆ ಅವರು ಕರೆ ನೀಡಿದರು.ರಾಜ್ಯ ಸರ್ಕಾರವು ಈಗ ಅನುಷ್ಠಾನಗೊಳಿಸುತ್ತಿರುವ ದತ್ತು ಕಾರ್ಯಕ್ರಮದ ಅಡಿಯಲ್ಲಿ ಯಾದಗಿರಿ ಕೋಟೆಯನ್ನು ಸಹ ಹೈದರಾಬಾದ್ ಮೂಲದ ಹರ್ಷ ಲಾಹೋಟಿ ಇವರ ಸಂಸ್ಥೆಗೆ ದತ್ತು ನೀಡುವ ಒಡಂಬಡಿಕೆ ಸಹ ಆಗಿದ್ದು, ಇಂದು ಅವರಿಗೆ ಸನ್ಮಾನ ಸಹ ಮಾಡಲಾಗಿದೆ ಎಂದು ಹೇಳಿದರು.
*ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಪುರ* ಅವರು ಯಾದಗಿರಿ ಜಿಲ್ಲೆಯ ಶಿರವಾಳ, ಏವೂರು, ಸನ್ನತಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಈ ದಿಶೆಯಲ್ಲಿ ಪ್ರವಾಸೋದ್ಯಮ ಸಚಿವರ ಆಸಕ್ತಿಯು ಇಂತಹ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ. ಮುಂಬರುವ ವರ್ಷಗಳಲ್ಲಿ ಇಂತಹ ಸ್ಮಾರಕಗಳು ಅಭಿವೃದ್ಧಿಯಾದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಇದಕ್ಕಾಗಿ ಜಿಲ್ಲಾಡಳಿತ, ತಾವು ಹಾಗೂ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಿಂದಲೂ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ನುಡಿದರು.ಇದೇ ಶಹಾಪುರ ಮಹಾದ್ವಾರ ಕೊಳ್ಳುರು ಅಗಸಿ, ದಿಗ್ಗಿ ಅಗಸಿ ಹಾಗೂ ವಿಶ್ವ ಪ್ರಸಿದ್ಧ ತಾಣ ಬುದ್ಧ ಮಲಗಿದ ಸ್ಥಳ, ಹಾಗೂ ಬುದ್ಧ ವಿಹಾರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು.*
ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಪ್ರವಾಸೋದ್ಯಮ ಇಲಾಖೆ ಆಯುಕ್ತ ದೇವರಾಜ, ನಿರ್ದೇಶಕರಾದ ಸಜಿಶ್ವರ, ಉಪ ನಿರ್ದೇಶಕರಾದ ಶ್ರೀಮತಿ ಮಂಜುಳಾ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಜನಾರ್ದನ, ಕೃಷ್ಣ ಕೃತಿ ಪೌಂಡೇಶನ್ ನ ವ್ಯವಸ್ಥಾಪಕರಾದ ಹರ್ಷ ಲಾಹೋಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಂತಮ್ಮ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
