
ಉದಯವಾಹಿನಿ ದೇವರಹಿಪ್ಪರಗಿ: ಮನುಷ್ಯನು ತನಗಾದ ನೋವಿಗೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ ಆದರೆ ಮೂಕ ಪ್ರಾಣಿಗಳ ಬಗ್ಗೆ ರೈತ ಮುಂಜಾಗ್ರತೆಯನ್ನು ವಹಿಸಬೇಕು ಜೊತೆಗೆ ಜಾನುವಾರುಗಳ ರಕ್ಷಣೆಗಾಗಿ ಈ ತರಹದ ಶಿಬಿರಗಳು ನಡೆಯಬೇಕು ಇವು ರೈತರಿಗೆ ವರದಾನವಾಗಿ ಪರಿಣಮಿಸುತ್ತವೆ ಎಂದು ದೇವರಹಿಪ್ಪರಗಿ ಕೃಷಿ ಇಲಾಖೆ ಅಧಿಕಾರಿಗಳಾದ ಸೋಮನಗೌಡ ಬಿರಾದಾರ ಹೇಳಿದರು.
ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರದಂದು ಜಲಾನಯನ ಇಲಾಖೆ ಹಾಗೂ ಪಶುಸಂಗೋಪನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಜಾನುವಾರುಗಳ ಆರೋಗ್ಯ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಬರಗಾಲದಿಂದ ರೈತರಿಗೆ ಪಶುಗಳ ಪಾಲನೆ, ಪೋಷಣೆ ಹಾಗೂ ಸಂರಕ್ಷಣೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ನಡೆಯುತ್ತಿದೆ, ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬರುವುದು ಸಹಜ. ಈ ಬಗ್ಗೆ ನಿಷ್ಕಾಳಜಿ ಮಾಡದೆ, ತಕ್ಷಣ ಪಶು ಆರೋಗ್ಯ ವೈದ್ಯರಲ್ಲಿ ಪರೀಕ್ಷೆ ಮಾಡಿ ಚಿಕಿತ್ಸೆ ಕೊಡಿಸಬೇಕು ಎಂದು ರೈತರಿಗೆ ಕೃಷಿ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಿ, ರೈತರಿಗೆ ಮಿನರಲ್ ಮಿಕ್ಸ್ ಪ್ಯಾಕೆಟ್ ವಿತರಿಸಿದರು.ದೇವರಹಿಪ್ಪರಗಿ ಪಶು ಸಂಗೋಪನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಡಿ.ಜಿ.ಸಜ್ಜನ ಅವರು ಮಾತನಾಡಿ,ಜಲಾನಯನ ಇಲಾಖೆ ಸಹಯೋಗದಲ್ಲಿ ಸುಮಾರು 105 ಜಾನುವಾರುಗಳಿಗೆ ಪರೀಕ್ಷೆ ನಡೆಸಿ, ಕೃತಕ ಗರ್ಭಧಾರಣೆ, ರಾಶಿಗಳಿಗೆ ಜ್ವರದ ಚಿಕಿತ್ಸೆ ಕೊಡುವ ಪಶುಗಳ ಪಾಲನೆ ಘೋಷಣೆ ಹಾಗೂ ಸಂರಕ್ಷಣೆ ಕುರಿತು ಬರಗಾಲ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ರೋಗಗಳ ಬಾರದಂತೆ ಮುಂಜಾಗ್ರತವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರೈತರಿಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ಸಂಗನಗೌಡ ಬಿರಾದಾರ ಮಾತನಾಡಿ, ಸರ್ಕಾರ ಶೀಘ್ರದಲ್ಲಿ ಬರ ಪರಿಹಾರ ಒದಗಿಸಬೇಕು. ರೈತರು, ಕೂಲಿಕಾರರಿಗೆ ಕೆಲಸ ನೀಡಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಜಾನುವಾರುಗಳಿಗೆ ಮೇವು ಸಂಗ್ರಹ ಮಾಡಲು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಆರ್.ಡಿ.ಚವ್ಹಾಣ, ತಾಂತ್ರಿಕ ಅಧಿಕಾರಿಗಳಾದ ಎಲ್.ಆರ್.ರಾಠೋಡ, ಪಶು ವೈದ್ಯಾಧಿಕಾರಿ ರಾಮನಗೌಡ ಪಾಟೀಲ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.
