ಉದಯವಾಹಿನಿ, ಬೆಂಗಳೂರು: ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದರೆ ಆ ಬಗ್ಗೆ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಪ್ರಸ್ತಾಪಿಸಬಹುದು. ಅದು ಬಿಟ್ಟು ಯತೀಂದ್ರರವರಿಗೂ ಅಧಿಕಾರಿಗಳ ವರ್ಗಾವಣೆಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮುಖ್ಯಮಂತ್ರಿ ಪುತ್ರ ಯತೀಂದ್ರ ಅವರು ಹೇಳಿರುವ ವಿವೇಕಾನಂದಗೂ, ಪೊಲೀಸ್ ಇಲಾಖೆಯಲ್ಲಿನ ವಿವೇಕಾನಂದಗೂ ಸಂಬಂಧ ಇಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ವಿಪಕ್ಷಗಳಿಗೆ ಸಮಾಧಾನವಾಗುವ ರೀತಿಯಲ್ಲೆ ಉತ್ತರ ಕೊಡುತ್ತೇನೆ ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಯತೀಂದ್ರ ಅವರು ಪ್ರಸ್ತಾಪಿಸಿರುವ ವಿವೇಕಾನಂದ ಪೊಲೀಸ್ ಅಧಿಕಾರಿ ಅಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ವಿವೇಕಾನಂದ ಎಂಬುವರು ಮೈಸೂರಿನಲ್ಲಿ ಬಿಇಓ ಆಗಿದ್ದಾರೆ. ಹೀಗಿದ್ದರೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯನ್ನು ಇಟ್ಟುಕೊಂಡು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
