ಉದಯವಾಹಿನಿ, ಹಾಸನ: ಹಾಸನಾಂಬೆ ಹುಂಡಿಯಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಹಾಸನಾಂಬೆ ದೇವಿಯ ದರ್ಶನೋತ್ಸವದಲ್ಲಿ ಒಟ್ಟು ೮,೭೨,೪೧,೫೩೧ ಕೋಟಿ ರೂ. ಸಂಗ್ರಹವಾಗಿದೆ.ಇತ್ತೀಚೆಗಷ್ಟೇ ಹಾಸನಾಂಬೆ ಉತ್ಸವಕ್ಕೆ ತೆರೆ ಬಿದ್ದಿತ್ತು.ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದಿದ್ದು, ೧೪ ದಿನಗಳ ದರ್ಶನದಿಂದಾಗಿ ಹಾಸನಾಂಬೆ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆದಾಯ ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದೆ.
ದೇವಿ ದರ್ಶನದ ೧ ಸಾವಿರ ಬೆಲೆಯ ಟಿಕೆಟ್ ಮಾರಾಟದಿಂದ ೩ ಕೋಟಿ ೯ ಲಕ್ಷದ ೮೯ ಸಾವಿರ ರೂ. ೩೦೦ ರೂ ಬೆಲೆಯ ಟಿಕೆಟ್ ಮಾರಾಟದಿಂದ ೨ ಕೋಟಿ ೩೫ ಲಕ್ಷದ ೪ ಸಾವಿರದ ೪೦೦ ರೂ. ಇನ್ನು ಲಾಡು ಮಾರಾಟದಿಂದ ೬೮ ಲಕ್ಷದ ೨೩ ಸಾವಿರದ ೭೬೦ ರೂ ಸಂಗ್ರಹವಾಗಿದೆ. ಈ ಹುಂಡಿ ಮೂಲಕ ೪ ಲಕ್ಷದ ೬೪ ಸಾವಿರ ಜಮೆ ಆಗಿದೆ. ದೇವಾಲಯದ ವಿವಿಧ ಭಾಗಗಳಲ್ಲಿ ಇಡಲಾಗಿದ್ದ ೨೧ ಕಾಣಿಕೆ ಹುಂಡಿಗಳಿಂದ ೨ ಕೋಟಿ ೫೦ ಲಕ್ಷದ ೭೭ ಸಾವಿರದ ೪೯೭ ರೂಪಾಯಿ ಸಂಗ್ರಹವಾಗುವ ಮೂಲಕ ಒಟ್ಟು ಎಲ್ಲ ಸೇರಿ ೮ ಕೋಟಿ ೭೨ ಲಕ್ಷದ ೪೧ ಸಾವಿರದ ೫೩೧ ರೂ ದಾಖಲೆ ಆದಾಯ ಗಳಿಸಿದೆ.ಕಾಣಿಕೆ ಹುಂಡಿಗೆ ವಿವಿಧ ಭಾಗದ ಭಕ್ತರು ಹರಕೆ ರೂಪದಲ್ಲಿ ನೀಡಿದ ೬೨ ಗ್ರಾಂ ಚಿನ್ನ, ೧೬೧ ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
