ಉದಯವಾಹಿನಿ, ಬೆಂಗಳೂರು: ಪಶ್ಚಿಮ ವಿಭಾಗದ ವಿಜಯನಗರದ ಉಪವಿಭಾಗದ ಪೊಲೀಸರು 13 ಪ್ರಕರಣಗಳನ್ನು ಭೇದಿಸಿ ನಗದೂ ಸೇರಿದಂತೆ 1.15 ಕೋಟಿ ರೂ. ಮೌಲ್ಯದ ಚಿನ್ನಾಭರಣ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ಒಟ್ಟಾರೆ 1,11,88,900 ರೂ. ಮೌಲ್ಯದ ಒಂದು ಕೆಜಿ 993 ಗ್ರಾಂ. ಚಿನ್ನಾಭರಣಗಳು 2.45 ಲಕ್ಷ ರೂ. ಮೌಲ್ಯದ 3 ಕೆಜಿ 500 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 1.14 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಗೋವಿಂದರಾಜನಗರ ಪೊಲೀಸ್ ಠಾಣೆಯ ಸ್ವತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ(33), ದಿಲೀಪ್(24) ಮತ್ತು ಅರ್ಜುನ್(23) ನನ್ನು ಬಂಧಿಸಿ 70 ಲಕ್ಷ ರೂ. ಮೌಲ್ಯದ 1 ಕೆಜಿ 215 ಗ್ರಾಂ ತೂಕದ ಚಿನ್ನಾಭರಣ ಮತ್ತು 3 ಕೆಜಿ 500 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ 14 ಪ್ರಕರಣಗಳು ಬೆಳಕಿಗೆ ಬಂದಿವೆ.
ಆರೋಪಿಗಳು ಹಲವು ತಿಂಗಳುಗಳಿಂದ ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಮಾಗಡಿರಸ್ತೆ, ಅನ್ನಪೂರ್ಣೇಶ್ವರ ನಗರ, ಕೊತ್ತನೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನಕಳವು ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
