ಉದಯವಾಹಿನಿ, ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಬೆನ್ನು ಬಿದ್ದಿರುವ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 9 ಜಿಲ್ಲೆಗಳಲ್ಲಿ 13 ಮಂದಿ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳು ಹಾಗೂ ಅವರ ಸಂಬಂಧಿಕರ ನಿವಾಸಗಳು ಸೇರಿ 68 ಕಡೆ ದಾಳಿ ನಡೆಸಿದ್ದಾರೆ.ಸುಮಾರು 200 ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಮುಂಜಾನೆ 6 ಗಂಟೆಯಿಂದ ರಾಜ್ಯದ ಎಲ್ಲೆಡೆ ಏಕಕಾಲಕ್ಕೆ ದಾಳಿ ನಡೆಸಿ ಸಂಜೆ 7 ಗಂಟೆವರೆಗೆ ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರಿನ ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ(ಇಇ) ಎಚ್.ಡಿ. ಚೆನ್ನಕೇಶವ, ರಾಮನಗರ ಜಿಲ್ಲೆ ಕಣಿಮಿಣಿಕೆ ಗ್ರಾಮದ ಕೆಎಂಎಫ್ ಮುಖ್ಯ ಕಾರ್ಯನಿರ್ವಾಹಕ (ಕಾರ್ಯದರ್ಶಿ) ಎಚ್.ಎಸ್. ಕೃಷ್ಣಮೂರ್ತಿ, ಬೆಂಗಳೂರು ಬೆಸ್ಕಾಂ ಜಾಗೃತ ದಳದ ಉಪ ಪ್ರಧಾನ ವ್ಯವಸ್ಥಾಪಕ ಟಿ.ಎನ್. ಸುಧಾಕರ್ ರೆಡ್ಡಿ, ಹುಬ್ಬಳ್ಳಿ ನಗರ ಹೆಸ್ಕಾಂ ನಗರ ವಿಭಾಗೀಯ ಸ್ಟೋರ್‌ನ ನಿವೃತ್ತ ಕಿರಿಯ ಅಭಿಯಂತರ (ಗ್ರೇಡ್-2) ಬಸವರಾಜ, ಮೈಸೂರು ಜಿಲ್ಲೆ ನಂಜನಗೂಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎಸ್. ಮಹದೇವಸ್ವಾಮಿ.
ಬೆಳಗಾವಿ ಕೆಆರ್‌ಐಡಿಎಲ್‌ನ ಅಧೀಕ್ಷಕ ಎಂಜಿನಿಯರ್ ತಿಮ್ಮರಾಜಪ್ಪ, ರಾಮನಗರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎನ್. ಮುನೇಗೌಡ, ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಎಚ್.ಡಿ. ನಾರಾಯಣಸ್ವಾಮಿ, ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯದ ಲೆಕ್ಕ ಸಹಾಯಕ (ಹೊರಗುತ್ತಿಗೆ) ಸುನಿಲ್ ಕುಮಾರ್.ಕೊಪ್ಪಳ ಜಿಲ್ಲೆ ಆನೆಗುಂದಿ ವಿಭಾಗದ ಡಿಎಫ್‌ಓ ಬಿ. ಮಾರುತಿ, ಬಳ್ಳಾರಿ ಜಿಲ್ಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಚಂದ್ರಶೇಖರ್ ಹಿರೇಮನಿ, ಯಾದಗಿರಿ ನಗರ ಸಭೆ ಆಯುಕ್ತ ಶರಣಪ್ಪ, ಯಾದಗಿರಿ ಜಿಲ್ಲೆ ಡಿಎಚ್‌ಒ ಡಾ| ಕೆ. ಪ್ರಭುಲಿಂಗ ಅವರಿಗೆ ಸೇರಿದ ಮನೆ, ಕಚೇರಿಗಳು ಹಾಗೂ ಅವರ ಸಂಬಂಧಿಗಳ ಮನೆಗಳಲ್ಲಿ ತಪಾಸಣೆ ನಡೆಸಲಾಗಿದೆ.
