ಉದಯವಾಹಿನಿ, ಬೆಳಗಾವಿ: ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿಗಳನ್ನು ಇನ್ನು ೧೫ ದಿನದಲ್ಲಿ ಕೈಗೆತ್ತಿಕೊಳ್ಳುವ ಭರವಸೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿಂದು ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ೨೦೧೮-೧೯ನೇ ಸಾಲಿನಲ್ಲಿ ವಿಜಯಪುರದ ಕುಡಿಯುವ ನೀರಿನ ಯೋಜನೆಯ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿ ೫೨ ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿತ್ತು. ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಹಣಕಾಸು ಇಲಾಖೆಯವರು ಈ ಹಿಂದೆ ೩೨ ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈಗ ಹೆಚ್ಚುವರಿಯಾಗಿ ಹಣ ನೀಡಲು ಸಾಧ್ಯವಿಲ್ಲ. ಬೇರೆ ಬೇರೆ ಮೂಲಗಳಿಂದ ಹಣವನ್ನು ಕ್ರೂಢೀಕರಿಸಿ ಎಂದು ಹೇಳಿದ್ದರು. ಅದರಂತೆ ಈ ಯೋಜನೆಗೆ ಅವಶ್ಯಕ ಇರುವ ಅನುದಾನವನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆಯ ಸ್ವಂತ ಅನುದಾನ, ೧೫ನೇ ಹಣಕಾಸು ಆಯೋಗದ ಅನುದಾನ, ನಗರ ಸ್ಥಳೀಯ ಸಂಸ್ಥೆಯ ವಾಣಿಜ್ಯ ಸಾಲ ಅಥವಾ ಅಮೃತ್-೨.೦ ಯೋಜನೆಯಡಿ ಕೈಗೊಳ್ಳುವಂತೆ ಸೂಚಿಸಿರುತ್ತದೆ. ಹಾಗಾಗಿ ಒಟ್ಟಾರೆ ೫೨ ಕೋಟಿ ರೂ. ಹಣ ಕ್ರೂಢೀಕರಿಸಿ ಯೋಜನೆಯನ್ನು ಇನ್ನು ೧೫ ದಿನಗಳೊಳಗಾಗಿ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಈ ಕಾಮಗಾರಿಯನ್ನು ಕೈಗೊಳ್ಳದೇ ಇರುವುದರಿಂದ ಪಿಎಸ್‌ಸಿ ಕೊಳವೆ ಮಾರ್ಗದಲ್ಲಿ ಪದೇ ಪದೇ ಪೈಪ್‌ಗಳು ಒಡೆದು ಸಾಕಷ್ಟು ನೀರು ಸೋರಿಕೆಯಾಗುತ್ತಿರುವುದು, ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ಸಾಕಷ್ಟು ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಈ ಯೋಜನೆಯನ್ನು ಪೂರೈಸುತ್ತೇವೆ. ಸಚಿವರಾದ ಎಂ.ಬಿ. ಪಾಟೀಲ್ ಅವರು ಸಹ ಈ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!