ಉದಯವಾಹಿನಿ,ಬೆಂಗಳೂರು: ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಾಕತ್ತಿದ್ದರೆ ಧಾರ್ಮಿಕ ಮುಖಂಡರಾದ ತನ್ವಿರ್ ಅಸ್ಮಿ ಅವರ ವಿರುದ್ಧ ಎನ್‍ಐಎ ತನಿಖೆ ನಡೆಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಅದರ ಬಳಿಕ ಯತ್ನಾಳ್ ಆರೋಪ ಮಾಡಿ ಸಮಾವೇಶದಲ್ಲಿದ್ದ ವಿಜಯಪುರ ಮೂಲದವರಾದ ತನ್ವೀರ್ ಅಸ್ಮಿಗೆ ಐಸಿಸ್ ಉಗ್ರರ ನಂಟಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವಿದೆ. ಬಸನಗೌಡ ಯತ್ನಾಳ್ ಅವರು ಎನ್‍ಐಎ ಮೂಲಕ ತನಿಖೆ ಮಾಡಿಸಿ ತಮ್ಮ ಆರೋಪವನ್ನು ಸಾಬೀತುಪಡಿಸಬೇಕು ಎಂದರು. ತಾವು ಯಾವುದೇ ತನಿಖೆಗಾದರೂ ಸಿದ್ಧ ಎಂದು ತನ್ವೀರ್ ಅಸ್ಮಿ ಹೇಳಿದ್ದಾರೆ. ತಮ್ಮ ಮೇಲಿನ ಆರೋಪ ಸಾಬೀತಾದರೆ ದೇಶ ತೊರೆಯುವುದಾಗಿ ಸವಾಲು ಹಾಕಿದ್ದಾರೆ.
