ಉದಯವಾಹಿನಿ, ಬೆಂಗಳೂರು: ನಗರದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕ್ಯಾನರೀಸ್ ಆಟೋಮೇಶನ್ಸ್ ಲಿಮಿಟೆಡ್ ನಿಂದ ಎನ್.ಆರ್. ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಅದ್ದೂರಿಯಾಗಿ ೧೫ ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಪ್ರತಿವರ್ಷ ವೈವಿಧ್ಯಮಯವಾಗಿ ರಾಜ್ಯೋತ್ಸವ ಆಚರಿಸುತ್ತಿರುವ ಐಟಿ ಸಂಸ್ಥೆ ಕ್ಯಾನರೀಸ್, ಈ ಬಾರಿಯೂ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಕ್ಯಾನರೀಸ್ ಮೇಳದಲ್ಲಿ ಹಾಡು, ಹರಟೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಐಟಿ ಸಂಸ್ಥೆಯಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಕನ್ನಡಿಗರಿಗೆ ಉದ್ಯೋಗ, ಕನ್ನಡ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ.
ಕ್ಯಾನರೀಸ್ ಆಟೋಮೇಶನ್ಸ್ ಲಿಮಿಟೆಡ್‌ನ ಸಿಇಒ ಶೇಷಾದ್ರಿ ಶ್ರೀನಿವಾಸ್ ಮಾತನಾಡಿ, ಬೆಂಗಳೂರು ನಮ್ಮ ಕರ್ಮ ಭೂಮಿ. ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅನ್ಯ ಭಾಷಿಕರು ಸಹ ಕನ್ನಡ ಕಲಿತು ಎಲ್ಲರೊಂದಿಗೆ ವ್ಯವಹರಿಸಬೇಕು, ನಮ್ಮ ಸಂಸ್ಥೆಯಲ್ಲಿ ಕನ್ನಡಕ್ಕೆ ಪ್ರಧಾನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಅರುಣ್ ಡಿ.ಕೆ, ಪುಷ್ಪರಾಜ್ ಶೆಟ್ಟಿ, ಸಿ. ರಘು, ವ್ಯವಸ್ಥಾಪಕ ನಿರ್ದೇಶಕರಾದ ಎಂ.ಆರ್. ರಾಮನ್ ಸುಬ್ಬರಾವ್, ಸಿಇಒ ಶೇಷಾದ್ರಿ, ಮತ್ತು ಲೀಡರ್ಶಿಪ್ ತಂಡ ಹಾಗೂ ಮುಖ್ಯಅತಿಥಿಗಳಾಗಿ ಶ್ರೀನಿವಾಸ್ ಉಡುಪ, ಹಿರಿಯ ಕವಿ ಬಿ.ಆರ್. ಲಕ್ಷ್ಮಣ ರಾವ್, ಉಪಸ್ಥಿತರಿದ್ದರು.
