ಉದಯವಾಹಿನಿ,ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ಶ್ರೀಕಿ ವಿಚಾರಣೆಗೆ ಹಾಜರಾಗದೆ ಮೊಂಡಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಇದು ಬಿಟ್ ಕಾಯಿನ್ ಹಗರಣ ಕುರಿತು ತನಿಖೆ ನಡೆಸುತ್ತಿರುವ ಸಿಐಡಿಗೆ ತಲೆನೋವು ತಂದಿದೆ.
ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಶ್ರೀಕಿಗೆ ೫-೬ ಬಾರಿ ನೋಟಿಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ. ಪ್ರತಿಬಾರಿಯೂ ಒಂದಲ್ಲ ಒಂದು ರೀತಿಯಲ್ಲಿ ಕಾರಣ ನೀಡಿ ವಿಚಾರಣೆಯಿಂದ ನುಣುಚಿಕೊಳ್ಳುತ್ತಿದ್ದಾನೆ.
ಒಂದು ಬಾರಿ ತಂದೆಗೆ ಹುಷಾರಿಲ್ಲ, ಮತ್ತೊಂದು ಬಾರಿ ತಾಯಿಗೆ ಹುಷಾರಿಲ್ಲ, ಕಡೆಗೆ ನನಗೂ ಹುಷಾರಿಲ್ಲ ಎಂಬ ಕಾರಣಗಳನ್ನು ನೀಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ.
ಒಂದೂವರೆ ತಿಂಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿ ಊಟ-ತಿಂಡಿ ಸಮಯದಲ್ಲಿ ಮತ್ತು ರಾತ್ರಿ ಮಲಗಲು ಶ್ರೀಕಿ ಮನೆಗೆ ತೆರಳುತ್ತಿದ್ದನು. ವಿಚಾರಣೆ ನಡೆಸಲು ಅಧಿಕಾರಿಗಳು ನಿಮ್ಹಾನ್ಸ್‌ಗೆ ತೆರಳಿದಾಗ ಎಸ್‌ಐಟಿ ತಂಡಕ್ಕೆ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೂ ಹಾಕಿದ್ದನು.
ಈ ಎಲ್ಲ ಮೊಂಡಾಟಗಳಿಂದ ಬಿಟ್ ಕಾಯಿನ್ ಹಗರಣ ಪ್ರಗತಿ ಕಾಣುತ್ತಿಲ್ಲ. ಈ ಹಿಂದೆ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿತ್ತು. ಸಿಸಿಬಿ ತನಿಖೆ ವೇಳೆ ಲೋಪ ನಡೆದಿದೆ ಎಂಬ ಅಂಶವೂ ಬಹಿರಂಗವಾಗಿತ್ತು. ಎಫ್‌ಐಆರ್ ದಾಖಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿದಾರನಾಗಿರುವ ಶ್ರೀಕಿ, ತನಿಖೆಗೆ ಸಹಕರಿಸದೆ ಮೊಂಡಾಟ ಪ್ರದರ್ಶಿಸುತ್ತಿದ್ದಾನೆ.
