ಉದಯವಾಹಿನಿ, ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂಭ್ರಮಕ್ಕಾಗಿ ಶೇಖರಿಸಿಟ್ಟಿದ್ದ ೨೧ ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಈ ಸಂಬಂಧ ನೈಜೀರಿಯಾ ಪ್ರಜೆಯನ್ನು ಬಲೆಗೆ ಕೆಡವಿದ್ದಾರೆ.
ಬಂಧಿತ ನೈಜೀರಿಯನ್ ಪ್ರಜೆ ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿಯಾಗಿದ್ದು,ಆತನಿಂದ ೨೧ ಕೋಟಿ ಮೌಲ್ಯದ ೧೬ ಕೆ.ಜಿ ತೂಕದ ಎಂಡಿಎಂಎ ಕ್ರಿಸ್ಟಲ್, ೫೦೦ ಗ್ರಾಂ ತೂಕದ ಕೊಕೇನ್, ೧ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ತಂಡವು ರಾಮಮೂರ್ತಿನಗರದಲ್ಲಿ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆಯನ್ನು ನಡೆಸಿ ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಿ ವಿಚಾರಣೆ ಕೈಗೊಂಡು ೨೧ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ ಎಂದರು.
ಆರೋಪಿಯು ೧ ವರ್ಷದ ಹಿಂದೆ ವ್ಯಾಪಾರಿ ವೀಸಾ ಪಡೆದು ಭಾರತಕ್ಕೆ ಬಂದು, ರಾಮಮೂರ್ತಿನಗರದಲ್ಲಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸವಿರುತ್ತಾನೆ. ೨೦೨೪ ರ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಮಾದಕ ವ್ಯಸನಿಗಳಿಗೆ ಡ್ರಗ್ಸ್ ಮಾರಾಟಕ್ಕೆ ಯೋಜನೆ ಹಾಕಿಕೊಂಡಿದ್ದ ಎಂದು ಹೇಳಿದರು. ಆರೋಪಿಯು ಎಂಡಿಎಂಎ ಕ್ರಿಸ್ಟಲ್, ಕೊಕೇನ್ ಅನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಲು ದೆಹಲಿ, ಮುಂಬೈ ಹಾಗೂ ಇತರೆ ರಾಜ್ಯಗಳಲ್ಲಿ ನೆಲೆಸಿರುವ ವಿದೇಶಿ ಮೂಲದ ವ್ಯಕ್ತಿಗಳಿಂದ ಚೂಡಿದಾರ್ ಬಟ್ಟೆಗಳಲ್ಲಿ, ಬೆಡ್‌ಶೀಟ್ ಕವರ್ ಗಳಲ್ಲಿ, ಸೋಪ್ ಬಾಕ್ಸ್ ಮತ್ತು ಚಾಕಲೇಟ್ ಬಾಕ್ಸ್‌ಗಳಲ್ಲಿ ನಿಷೇದಿತ ಮಾದಕ ವಸ್ತುಗಳನ್ನು ಅಡಗಿಸಿ ಯಾರಿಗೂ ಅನುಮಾನ ಬರದಂತೆ ಖರೀದಿ ಮಾಡಿಕೊಂಡು ಬಂದು ತನ್ನ ವಾಸದ ಮನೆಯಲ್ಲಿರಿಸಿಕೊಂಡಿರುತ್ತಾನೆ.
