ಉದಯವಾಹಿನಿ,ವಿಧಾನಸಭೆ: ಕೈಗಾರಿಕೆ ಹಾಗೂ ಒಳಚರಂಡಿ ತ್ಯಾಜ್ಯ ಸೇರಿ ರಾಜ್ಯದ 12 ಪ್ರಮುಖ ನದಿಗಳು ಕಲುಷಿತಗೊಂಡಿದ್ದು, 2022-23ನೇ ಸಾಲಿನಲ್ಲಿ ಹೊಸತಾಗಿ ನಾಲ್ಕು ನದಿಗಳು ಈ ಪಟ್ಟಿಗೆ ಸೇರ್ಪಡೆ ಆಗಿವೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಉತ್ತರ ನೀಡಿದ್ದಾರೆ.
ದರ್ಶನ್ ಅವರು ನದಿ ಪಾತ್ರದಲ್ಲಿ ಇರುವ ಕೈಗಾರಿಕೆ ಮತ್ತು ವಸತಿ ಪ್ರದೇಶಗಳಿಂದ ಮಲಿನ ನೀರು ನದಿಗಳಿಗೆ ಸೇರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಇದರಿಂದ ನೀರಿನ ಗುಣಮಟ್ಟ ಮತ್ತು ಜನರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಕೇಳಿದ್ದರು.
ರಾಜ್ಯದಲ್ಲಿನ ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ತುಂಗಾ, ಕಾವೇರಿ, ಕಬಿನಿ, ಕಾಗಿನ, ಕೃಷ್ಣ, ಶಿಂಷಾ, ಭೀಮಾ ಹಾಗೂ ನೇತ್ರಾವತಿ ನದಿಗಳು ಈಗಾಗಲೇ ಕಲುಷಿತ ನದಿಗಳ ಪಟ್ಟಿಯಲ್ಲಿವೆ. ಇದರಲ್ಲಿ ಅರ್ಕಾವತಿ ನದಿಯಲ್ಲಿ ಬಿಒಡಿ ಸಾಂದ್ರತೆ ಪ್ರತಿ ಲೀಟರ್‌ಗೆ 30 ಮಿ.ಗ್ರಾಂ ಗಿಂತಲೂ ಹೆಚ್ಚಿದ್ದು, ಅತಿ ಕಲುಷಿತ ನದಿ ಇದಾಗಿದೆ. ತುಂಗಭದ್ರಾ, ಭದ್ರಾ ಹಾಗೂ ಶಿಂಷಾ ನದಿಗಳ ನೀರಿನಲ್ಲಿ 6-10 ಮಿ.ಲೀ. ಬಿಒಡಿ ಸಾಂದ್ರತೆ ಇದೆ. ಉಳಿದ ಎಂಟು ನದಿಗಳಲ್ಲಿ 3-6 ಮಿ.ಗ್ರಾಂನ ಒಳಗೆ ಇದೆ ಎಂದು ಉತ್ತರ ನೀಡಿದ್ದಾರೆ.
