ಉದಯವಾಹಿನಿ, ಮಂಡ್ಯ: ಬಯೋಮೆಟ್ರಿಕ್ ನೋಂದಣಿ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಅಡಿ ಭತ್ತ ಖರೀದಿ ಇನ್ನೂ ಆರಂಭ ಆಗಿಲ್ಲ. ಮತ್ತೊಂದೆಡೆ ದಲ್ಲಾಳಿಗಳು ರೈತರಿಗೆ ಹೆಚ್ಚಿನ ದರ ನೀಡಿ ಖರೀದಿಯಲ್ಲಿ ತೊಡಗಿದ್ದಾರೆ. ಜಿಲ್ಲಾಡಳಿತವು ನ.15ರಿಂದಲೇ ಭತ್ತ ಖರೀದಿ ಮಾಡುವ ರೈತರಿಂದ ನೋಂದಣಿ ಡಿ.1ರಿಂದ ಖರೀದಿಗೆ ಸಿದ್ಧತೆ ನಡೆಸಿತ್ತು. ಆದರೆ ತಾಂತ್ರಿಕ ಕಾರಣದ ನೆಪವೊಡ್ಡಿ ಇನ್ನೂ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ. ಮಧ್ಯವರ್ತಿಗಳ ಕಾಟ ತಪ್ಪಿಸಲು ಈ ವರ್ಷದಿಂದ ಬಯೋಮೆಟ್ರಿಕ್ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಎನ್‌ಐಸಿಯಿಂದ ಈ ತಂತ್ರಜ್ಞಾನ ಇನ್ನೂ ಅಳವಡಿಕೆ ಆಗಿಲ್ಲ. ಹೀಗಾಗಿ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ವಿಳಂಬ ಆಗುತ್ತಿದೆ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಕುಮಾರ್.ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಈ ವರ್ಷ ಮಳೆ ಕೊರತೆ ಹಾಗೂ ಕೆಆರ್‌ಎಸ್ ವ್ಯಾಪ್ತಿಯಲ್ಲಿ ಕಟ್ಟುನೀರು ಪದ್ಧತಿ ನಡುವೆಯೂ ರೈತರು ಅಷ್ಟಿಷ್ಟು ಉತ್ತಮ ಫಸಲು ತೆಗೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 58 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದ್ದು, ಇದರಲ್ಲಿ ಈ ವರ್ಷ 50 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬೆಳೆ ಬೆಳೆಯಲಾಗಿದೆ. ನೀರಿನ ಕೊರತೆಯಿಂದಾಗಿ ಇನ್ನೂ 8 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಭತ್ತದ ಕೃಷಿ ನಡೆದಿಲ್ಲ. ಹೀಗಾಗಿ ಈ ವರ್ಷ ಉತ್ಪನ್ನದ ಪ್ರಮಾಣ ಕಡಿಮೆ ಆಗಲಿದೆ.
