ಉದಯವಾಹಿನಿ, ಕೋಲಾರ: ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ ಕೋಲಾರ ಜಿಲ್ಲೆಯ 254 ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹಾಗೂ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಗಳಿಗೆ ಒಟ್ಟು ₹ 11.13 ಕೋಟಿ ದಂಡ ವಿಧಿಸಲಾಗಿದೆ.
ಜೈವಿಕ ವೈದ್ಯಕೀಯ ತ್ಯಾಜ್ಯ ನಿಯಮ-2016 ಉಲ್ಲಂಘನೆ ಆಗಿರುವ ವಿಚಾರ ಪ್ರಧಾನ ಮಹಾಲೇಖಪಾಲರು (ಎಜೆ) ಸಲ್ಲಿಸಿರುವ ಲೆಕ್ಕಪರಿಶೋಧನಾ ವರದಿಯ ಉಲ್ಲೇಖದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಬಿ) ನೋಟಿಸ್ ನೀಡಿದೆ.
ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿರುವ ಆಸ್ಪತ್ರೆ, ಕ್ಲಿನಿಕ್ ಹಾಗೂ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ದಿನಕ್ಕೆ ಕನಿಷ್ಠ ₹1,200 ದಂತೆ ತಲಾ ₹4.38 ಲಕ್ಷ ದಂಡ ಪಾವತಿಸಬೇಕಾಗಿದೆ.
ನಿಯಮಾನುಸಾರ ಜಿಲ್ಲೆಯಲ್ಲಿ ಮೀರಾ ಎನ್ವಿರಾಟೆಕ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಬೇಕಿತ್ತು. ಆದರೆ, ಅವೈಜ್ಞಾನಿಕ ನಿರ್ವಹಣೆ ಮೂಲಕ ಎಲ್ಲಾ ನಿಯಮ ಗಾಳಿಗೆ ತೂರಿರುವುದು ಕಂಡುಬಂದಿದೆ. ಈ ಎಲ್ಲಾ ಆಸ್ಪತ್ರೆ ಮತ್ತು ಪ್ರಯೋಗಾಲಯಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಎದುರಿಸುತ್ತಿವೆ.
‘ಆಸ್ಪತ್ರೆ, ಕ್ಲಿನಿಕ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಕೆಲ ಆಸ್ಪತ್ರೆ, ಕ್ಲಿನಿಕ್‌ಗಳು ಮುಚ್ಚಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿವೆ. ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸಂಬಂಧ ಆಸ್ಪತ್ರೆ, ಕ್ಲಿನಿಕ್ ತೆರೆಯಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದು ಮೀರಾ ಎನ್ವಿರಾಟೆಕ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡರೆ ಮಾತ್ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ಅಡಿ ನೋಂದಣಿ ಆಗುತ್ತದೆ.
