ಉದಯವಾಹಿನಿ, ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬಾವ ಮಹದೇವಯ್ಯ ಪಿ. ಅವರ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಶುಕ್ರವಾರ ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಮುರುಗನ್ ಬಂಧಿತ ಆರೋಪಿ. ತಮಿಳುನಾಡು ಮೂಲದ ಈತ, ಕೆಲ ವರ್ಷಗಳಿಂದ ಮಹದೇವಯ್ಯ ಅವರ ಪಕ್ಕದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ.ಮಹದೇವಯ್ಯ ಅವರಿಗೆ ಪರಿಚಿತನಾಗಿದ್ದ ಆರೋಪಿಗೆ, ಅವರ ಹಣದ ವಹಿವಾಟಿನ ಬಗ್ಗೆಯೂ ಮಾಹಿತಿ ಇತ್ತು. ಹಾಗಾಗಿ, ತನ್ನ ಸಹಚರರೊಂದಿಗೆ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಸದ್ಯ ಬಂಧಿತ ಮುರುಗನ್ ನನ್ನು ತಮಿಳುನಾಡಿನಿಂದ ಜಿಲ್ಲೆಗೆ ಕರೆ ತರಲಾಗುತ್ತಿದೆ. ಕೋರ್ಟ್ ಎದುರು ಹಾಜರುಪಡಿಸಿದ ಬಳಿಕ, ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಮೂಲಗಳು ಹೇಳಿವೆ.
