ಉದಯವಾಹಿನಿ, ಬೆಂಗಳೂರು : ಸಂಸತ್ ಭದ್ರತಾ ವೈಫಲ್ಯವನ್ನು ಒಪ್ಪಲು ಸಿದ್ದವಿಲ್ಲದ ಕೇಂದ್ರ ಸರ್ಕಾರ 78 ಸಂಸದರನ್ನು ಸ್ಪೀಕರ್ ಮೂಲಕ ಅಮಾನತ್ತು ಮಾಡಿಸಿದೆ. ಈ ಮೂಲಕ ಈ ಅಧಿವೇಶನದ ಅವಧಿಯಲ್ಲಿ 92 ಸಂಸದರನ್ನು ಅಮಾನತ್ತು ಮಾಡಿದಂತಾಗಿದೆ. ಇದೇನು ನಾಜಿ ಆಡಳಿತವೋ ಅಥವಾ ಪ್ರಜಾಪ್ರಭುತ್ವವೋ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ಧಾಳಿ ನಡೆಸಿದರು.ಈ ಬಗ್ಗೆ ಮಾತನಾಡಿದ ಅವರು ಸಂಸತ್ತಿನ ಕಲಾಪ ನಡೆಯುವುದೇ ಆಳುವ ಸರ್ಕಾರದ ತಪ್ಪು ಒಪ್ಪುಗಳನ್ನು ತಿದ್ದಿ ಪ್ರಜೆಗಳ ರಕ್ಷಣೆ ಕಾಪಾಡುವುದಕ್ಕಾಗಿ. ಅಂತಹ ಸಂಸತ್ತಿನ ಮೇಲೆಯೇ ಮೊನ್ನೆ ದಾಳಿಯಾಗಿದೆ. ಈ ಬಗ್ಗೆ ಸರ್ಕಾರದಿಂದ ಉತ್ತರ ಬಯಸುವುದು ತಪ್ಪೆ? ಸಂಸದರು ಸರ್ಕಾರದಿಂದ ಸ್ಪಷ್ಟನೆ ಕೇಳಬಾರದೆ.?

ಈ ಬಾರಿಯ ಸಂಸತ್ನ ಚಳಿಗಾಲದ ಅಧಿವೇಶನ ಇತಿಹಾಸದಲ್ಲೇ ಅತ್ಯಂತ ಕರಾಳ ಅಧಿವೇಶನ. ಈ ಅಧಿವೇಶನದಲ್ಲಿ ಒಂದು ಕಡೆ ದುಷ್ಕರ್ಮಿಗಳಿಂದ ಸಂಸದರಿಗೆ ಜೀವಬೆದರಿಕೆಯ ಯತ್ನವಾದರೆ, ಮತ್ತೊಂದು ಕಡೆ ಕೇಂದ್ರ ಸರ್ಕಾರ 92 ಸಂಸದರನ್ನು ಅಮಾನತ್ತು ಮಾಡಿಸುವ ಮೂಲಕ ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತು. ಹೇಡಿಗಳಿಗೆ ಸತ್ಯಕ್ಕೆ ಎದೆ ತೋರಿಸುವ ಎದೆಗಾರಿಕೆ ಇರುವುದಿಲ್ಲ. ತಮ್ಮದು ಹೇಡಿಗಳ ಸರ್ಕಾರ ಅಲ್ಲ ಎನ್ನುವುದಾಗಿದ್ದರೆ ಅಮಿತ್ ಶಾ ಕಲಾಪದಲ್ಲಿ ಸ್ಪಷ್ಟನೆ ಕೊಡುತ್ತಿದ್ದರು. ಹೀಗೇಕೆ ಹೇಡಿಗಳಂತೆ ವರ್ತಿಸುತ್ತಿದ್ದರು.?

ಪಕ್ಷಾತೀತವಾಗಿ ವರ್ತಿಸಬೇಕಾದ ಲೋಕಸಭೆಯ ಸ್ಪೀಕರ್ ಇನ್ನೂ ತಮ್ಮ ಪೂರ್ವಾಶ್ರಮದ ಗುಂಗಿನಲ್ಲೇ ಇದ್ದಾರೆ. ತಾವು ಸ್ಪೀಕರ್ ಎನ್ನುವುದನ್ನು ಮರೆತು BJPಯ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ತಮ್ಮ ಸಾಂವಿಧಾನಿಕ ಜವಬ್ಧಾರಿ ಮರೆತಿದ್ದಾರೆ. ಸಂಸತ್ ಭದ್ರತಾ ವೈಫಲ್ಯದಲ್ಲಿ ಗೃಹ ಇಲಾಖೆಯ ಹೊಣೆಗಾರಿಕೆ ಎಷ್ಟಿದೆಯೋ ಅಷ್ಟೆ ಹೊಣೆಗಾರಿಕೆ ಸ್ಪೀಕರ್ರವರಿಗೂ ಇದೆ. ಸಂಸತ್ ರಕ್ಷಣೆಯ ಜವಬ್ಧಾರಿ ಸ್ಪೀಕರ್ರವರದ್ದು. ಹಾಗಾಗಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರದ ಜೊತೆ ಕೈ ಜೋಡಿಸಿ 92 ಸಂಸದರ ಅಮಾನತ್ತು ಮಾಡಿ ದ್ವನಿ ಅಡಗಿಸುವ ಯತ್ನ ಮಾಡಿದ್ದಾರೆ ಕೇಂದ್ರ ಸರ್ಕಾರದ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ಧಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!