ಉದಯವಾಹಿನಿ ರಾಮನಗರ: ವಿಶ್ವದಲ್ಲಿ ಭಾರತದ ರೇಷ್ಮೆಗೆ ಅತೀ ಹೆಚ್ಚಿನ ಬೇಡಿಕೆ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಸಮನ್ವಯದೊಂದಿಗೆ ರೇಷ್ಮೆ ಬೆಳೆಗಾರರಿಗೆ ವಿವಿಧ ಸೌಲಭ್ಯ ನೀಡಿ ರೇಷ್ಮೆ ಉತ್ಪಾದನೆಯ ಹೆಚ್ಚಳಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಕೇಂದ್ರದ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಷ್ ಅವರು ತಿಳಿಸಿದರು.
ಅವರು ಇಂದು ರಾಮನಗರ ಜಿಲ್ಲೆಯ ರೇಷ್ಮೇ ಮಾರುಕಟ್ಟಗೆ ಭೇಟಿ ನೀಡಿ ಅಲ್ಲಿನ ಗೂಡಿನ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರೇಷ್ಮೆನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮನಗರ ಜಿಲ್ಲೆಯು ಮಹಾನಗರ ಬೆಂಗಳೂರಿಗೆ ಸಮೀಪವಿದ್ದು ದೇಶದಲ್ಲಿ ಅತಿ ದೊಡ್ಡ ಸಿಲ್ಕ್ ಹಬ್‌ಅನ್ನು ಹೊಂದಿರುವ ಜಿಲ್ಲೆಯಾಗಿದೆ.
ದೇಶದಲ್ಲಿ ರಾಮನಗರ ಜಿಲ್ಲೆಯು ದೊಡ್ಡ ಮಾರುಕಟ್ಟೆ ಹೊಂದಿದ್ದು ಪ್ರಸ್ತುತ ಜಿಲ್ಲೆಯಲ್ಲಿ ೧ಲಕ್ಷ ೩೦ ಸಾವಿರ ಎಕರೆಯಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲಾಗುತ್ತಿದೆ. ರೇಷ್ಮೇ ಉತ್ಪಾದನೆಯ ಉತ್ತೇಜನಕ್ಕೆಂದು ಪಾರದರ್ಶಕವಾಗಿ ರಾಜ್ಯ ಸರ್ಕಾರ ಶೇ. ೫೦ ರಷ್ಟು, ಕೇಂದ್ರ ಸರ್ಕಾರ ಶೇ.೨೫ ರಷ್ಟು, ಹಾಗೂ ಎಸ್.ಸಿ, ಎಸ್.ಟಿ ಶೇ. ೯೦ ರಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯನ್ನು ಬೆಳೆಯುವ ಸಂಕಲ್ಪ ಹೊಂದಿದ್ದು, ಅಂದಾಜು ೧೧ ಸಾವಿರದಷ್ಟು ರೇಷ್ಮೆ ಪ್ರಸ್ತುತ ಭಾರತದಲ್ಲಿ ತಯಾರಾಗುತ್ತಿದೆ. ಫ್ಯಾಕ್ಟರಿ ಟು ಫಾರಿನ್ ರಾಮನಗರದಲ್ಲಿ ಬೃಹತ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ಆಡಳಿತಾತ್ಮಕ ಹಾಗೂ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದರು.ರೈತರು ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರೋಪಕರಣ ಬಳಿಸಿಕೊಂಡು ಹೆಚ್ಚು ರೇಷ್ಮೆ ಉತ್ಪಾದಿಸಲು ಯಾವುದೇ ಅಗತ್ಯವಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ನೀಡಲಾಗುವುದ. ಅತಿ ಹೆಚ್ಚು ರಿಲರ್ಸ್ಗಳನ್ನು ಹೊಂದಿರುವ ರೇಷ್ಮೆ ಮಾರುಕಟ್ಟೆಯು ಇದಾಗಿದ್ದು ಉತ್ತಮವಾಗಿ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ನಮಗೆ ಬೇಡಿಕೆ ಇರುವಷ್ಟು ರೇಷ್ಮೆ ತಯಾರಿಸಲು ಸಾಧ್ಯವಾತ್ತಿಲ್ಲ, ಈ ಸಮಸ್ಯೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಚಿವರು ರಾಮನಗರ ತಾಲ್ಲೂಕಿನ ಅಚ್ಚಲು ಗ್ರಾಮಕ್ಕೆ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಎಲೆಕೇರಿಯಲ್ಲಿರುವ ಬೃಹತ್ ರೇಷ್ಮೆ ಕಾರ್ಖನೆಗೆ ಭೇಟಿ ನೀಡಿ ಅಲ್ಲಿನ ರೇಷ್ಮೆ ನೂಲಿನ ಚಟುವಟಿಕೆಗಳನ್ನು ವಿಕ್ಷೀಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಗೌತಮ್ ಗೌಡ, ರೇಷ್ಮೆ ಇಲಾಖೆ ಆಯುಕ್ತೆ ಜೋತ್ಸ್ನಾ, ರಾಮನಗರ ತಾಲ್ಲೂಕು ತಹಸೀಲ್ದಾರ್ ಎಂ.ವಿಜಯ್ ಕುಮಾರ್, ರೇಷ್ಮೆ ಮಾರುಕಟ್ಟೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!