ಉದಯವಾಹಿನಿ, ಹೈದರಾಬಾದ್(ತೆಲಂಗಾಣ)​: ಬಡವರ ಮನೆಗಳ ಮೇಲೆ ಉಚಿತವಾಗಿ ಸೌರ​ ವ್ಯವಸ್ಥೆಯನ್ನು ಅಳವಡಿಸಲು ನೆರೆಯ ತೆಲಂಗಾಣ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಡಿಸೆಂಬರ್​ ಒಳಗೆ 20 ಲಕ್ಷ ಮನೆಗಳಿಗೆ ಸೌರ ಫಲಕವನ್ನು 24 ಸಾವಿರ ಕೋಟಿ ರೂ ವೆಚ್ಚದಲ್ಲಿ ಅಳವಡಿಸಲು ನಿರ್ಧರಿಸಲಾಗಿದ್ದು, ಮುಂದಿನ ಎರಡು ವರ್ಷದಲ್ಲಿ ಎಲ್ಲಾ ಬಡವರ ಮನೆಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸುವ ಉದ್ದೇಶ ಹೊಂದಲಾಗಿದೆ.

ಇದು ಯಶಸ್ವಿಯಾದರೆ, ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸಂಪೂರ್ಣ ವೆಚ್ಚ ಭರಿಸಿ ಬಡವರಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಮೇಲ್ಛಾವಣಿ ಸೌರಶಕ್ತಿ ಯೋಜನೆ ಜಾರಿಗೆ ತಂದ ರಾಜ್ಯವಾಗಲಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಯಡಿ ಒಟ್ಟು 24 ಸಾವಿರ ಕೋಟಿ ರೂ. ವೆಚ್ಚದಲ್ಲಿ 12 ಸಾವಿರ ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಇದರ ಜೊತೆಗೆ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಸಹಕಾರ ಕೋರಿದೆ. ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಇತ್ತೀಚೆಗೆ ಈ ಪ್ರಸ್ತಾವನೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ಪಿಎಂ ಸೂರ್ಯಘರ್ ಯೋಜನೆಯಡಿಯಲ್ಲಿ ದೇಶದಲ್ಲಿ ಒಂದು ಕೋಟಿ ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಎಂಎನ್​ಆರ್​ಇ ಸಬ್ಸಿಡಿ ನೀಡುತ್ತಿದೆ. ಯಾವುದೇ ವ್ಯಕ್ತಿ ತನ್ನ ಮನೆ ಮೇಲೆ ಸೌರಶಕ್ತಿ ಅಳವಡಿಸಿಕೊಂಡರೆ, 1 ಕಿಲೋವ್ಯಾಟ್‌ಗೆ 30 ಸಾವಿರ ರೂ., ಎರಡಕ್ಕೆ 60 ಸಾವಿರ ರೂ. ಮತ್ತು ಗರಿಷ್ಠ 3 ಕಿಲೋವ್ಯಾಟ್‌ಗೆ 78 ಸಾವಿರ ರೂ. ಸಬ್ಸಿಡಿಯನ್ನು ಮನೆ ಮಾಲೀಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ನಿಬಂಧನೆ ಅಡಚಣೆಯಾಗಿದೆ ಎಂದು ರಾಜ್ಯ ಇಂಧನ ಇಲಾಖೆ ಎಂಎನ್​ಆರ್​ಇಗೆ ತಿಳಿಸಿದೆ. ಖಾಸಗಿ ಸೌರ ಕಂಪನಿಗಳೊಂದಿಗೆ ರಾಜ್ಯದ ಬಡವರಿಗೆ ಸೇರಿದ 20 ಲಕ್ಷ ಮನೆಗಳಲ್ಲಿ ಸೌರಶಕ್ತಿಯನ್ನು ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.

ರಾಜ್ಯ ಸರ್ಕಾರ ಜನರಿಗೆ ನೀಡುವ ಸಬ್ಸಿಡಿಯನ್ನು ಆ ಕಂಪನಿಗಳ ಬ್ಯಾಂಕ್ ಖಾತೆಗಳಿಗೆ ಕಳುಹಿಸಬೇಕೆಂದು ಕೇಳಿದೆ. ಈಗಾಗಲೇ ಕೆಲವು ಹಳ್ಳಿಗಳಲ್ಲಿ ಕಂಪನಿಗಳೊಂದಿಗೆ ಪ್ರಾಯೋಗಿಕ ಆಧಾರದ ಮೇಲೆ 40 ಸಾವಿರ ಮನೆಗಳಿಗೆ ಸೌರ ಅಳವಡಿಸಲಾಗುತ್ತಿದೆ. ಆ ಕಂಪನಿಗಳ ಖಾತೆಗಳಿಗೆ ಸಬ್ಸಿಡಿಯನ್ನು ಕಳುಹಿಸಲು ಒಪ್ಪಿಕೊಂಡಿರುವುದರಿಂದ, ರಾಜ್ಯ ಇಂಧನ ಇಲಾಖೆ ಇತ್ತೀಚೆಗೆ 20 ಲಕ್ಷ ಮನೆಗಳಿಗೆ ಅದೇ ರೀತಿ ನೀಡಬೇಕೆಂದು ವಿನಂತಿಸಿದೆ.

ಎಂಎನ್​ಆರ್​ಇ ಅನುಮತಿಸಿದರೆ 20 ಲಕ್ಷ ಮನೆಗಳಲ್ಲಿ 2 ಕಿ.ವ್ಯಾ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲು ಪ್ರತಿ ಮನೆಗೆ ಸರಾಸರಿ 1.20 ಲಕ್ಷ ರೂ. ವೆಚ್ಚವಾಗುತ್ತದೆ. ಇದರಲ್ಲಿ ಸೌರ ಕಂಪನಿಗಳಿಗೆ 60 ಸಾವಿರ ರೂ. ಸಬ್ಸಿಡಿ ನೀಡುತ್ತದೆ. ಉಳಿದ 12 ಸಾವಿರ ಕೋಟಿ ರೂ.ಗಳನ್ನು ಸಾಲವಾಗಿ ಸಂಗ್ರಹಿಸಿ ಈ ಯೋಜನೆಗೆ ಖರ್ಚು ಮಾಡುವ ಪ್ರಸ್ತಾವನೆಗಳಿವೆ. ದಿನಕ್ಕೆ ಪ್ರತಿ ಮನೆಗೆ 8 ಯೂನಿಟ್‌ಗಳ ದರದಲ್ಲಿ ಒಟ್ಟು 1.60 ಕೋಟಿ ಯೂನಿಟ್ ವಿದ್ಯುತ್ ಅನ್ನು 20 ಲಕ್ಷ ಮನೆಗಳಿಂದ ಉತ್ಪಾದಿಸಲಾಗುತ್ತದೆ ಮತ್ತು ವಿದ್ಯುತ್ ಗ್ರಿಡ್‌ಗೆ ಸರಬರಾಜು ಮಾಡಲಾಗುತ್ತದೆ.

 

Leave a Reply

Your email address will not be published. Required fields are marked *

error: Content is protected !!