ಉದಯವಾಹಿನಿ, ಉದಯಪುರ್(ರಾಜಸ್ಥಾನ): ರಾಜಸ್ಥಾನದ ಉದಯಪುರದ ಮೆನಾರ್​ ಗ್ರಾಮದಲ್ಲಿನ ಹೋಳಿ ಸಂಭ್ರಮಾಚರಣೆ ಕೇವಲ ಸಾಂಕೇತಿಕವಲ್ಲ. ಅದು ಇತಿಹಾಸದ ಶೌರ್ಯ ಮತ್ತು ಸಂಪ್ರದಾಯದ ವಿಶಿಷ್ಟ ಸಮ್ಮಿಲನ. ಉದಯಪುರದಿಂದ 45 ಕಿ.ಮೀ ದೂರದ ಮೆನಾರ್​ ಗ್ರಾಮದಲ್ಲಿ ಹೋಳಿ ಸಾಮಾನ್ಯ ಆಚರಣೆಗಿಂತ ವಿಭಿನ್ನವಾಗಿದೆ. ಇಲ್ಲಿ ಹೋಳಿಯ ಮೂರನೇ ದಿನ ಜಮ್ರಾಬಿಜ್​ (ಕೃಷ್ಣ ಪಕ್ಷ ದ್ವಿತೀಯ)ದಂತು ಬರೂದ್​ ಹೋಳಿ ಆಚರಿಸಲಾಗುತ್ತದೆ. ಇದು ಮೊಘಲ್ ಪಡೆಗಳ ವಿರುದ್ಧ ಐತಿಹಾಸಿಕ ವಿಜಯದ ಆಚರಣೆಯಾಗಿದೆ.

ಹಾಗಾಗಿ, ಈ ಬರೂದ್​ ಹೋಳಿಗೆ 450ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಈ ಹಳ್ಳಿಯಲ್ಲಿ ಹೋಳಿಯನ್ನು ಬಣ್ಣ ಮತ್ತು ಹೂವುಗಳ ಬದಲಾಗಿ ಗುಂಡು, ಫಿರಂಗಿ ಮತ್ತು ಪಟಾಕಿ ಸಿಡಿಸುವುದರೊಂದಿಗೆ ಆಚರಿಸಲಾಗುತ್ತದೆ. ಇದು ಶತಮಾನಗಳ ಹಿಂದೆ ಮೊಘಲ್ ಸೈನ್ಯವನ್ನು ಸೋಲಿಸಿದ ಸ್ಥಳೀಯ ಯೋಧರ ವಿಜಯವನ್ನು ಪ್ರದರ್ಶಿಸುವ ಆಚರಣೆಯಾಗಿ ರೂಢಿಗತವಾಗಿದೆ.

ಸ್ಥಳೀಯರು ಹೇಳುವಂತೆ, ಈ ಆಚರಣೆಯನ್ನು ಪೀಳಿಗೆಯಿಂದ ಪೀಳಿಗೆಗೆ ಎಚ್ಚರಿಕೆಯಿಂದ ಮುಂದುವರೆಸಿಕೊಂಡು ಬರಲಾಗುತ್ತಿದೆ. ಬರೂದ್​ ಹೋಳಿ ಕೇವಲ ಹಬ್ಬವಲ್ಲ, ನಮ್ಮ ಪೂರ್ವಜರ ಧೈರ್ಯ ಮತ್ತು ಶೌರ್ಯದ ಸಂಕೇತ. ಮೊಘಲ್ ಸೇನೆಯ ವಿರುದ್ಧ ಅವರು ತೋರಿದ ಪರಾಕ್ರಮ ಮತ್ತು ಐತಿಹಾಸಿಕ ವಿಜಯದ ಗೌರವಾಚರಣೆ. ಇಂದಿಗೂ ಇದನ್ನು ಹೆಮ್ಮೆಯಿಂದ ಮುಂದುವರೆಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರಾದ ರಾಜೇಶ್​.

ಇತಿಹಾಸಕಾರ ಚಂದ್ರಶೇಖರ ಶರ್ಮಾ ಅವರು ಮಾತನಾಡಿ, ಈ ಆಚರಣೆ ಮೆನಾರ್ ಗ್ರಾಮದ ಸಾಂಸ್ಕೃತಿಕ ಗುರುತಿನ ಅವಿಭಾಜ್ಯ ಅಂಗವಾಗಿ ಉಳಿದಿದೆ. ಪ್ರತೀ ವರ್ಷ ಸುತ್ತಮುತ್ತಲಿನ ಸುಮಾರು 200 ಹಳ್ಳಿಗಳಿಂದ ಸಾವಿರಾರು ಜನರು ಈ ಅದ್ಭುತ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುತ್ತಾರೆ. ಇತರೆ ನಗರಗಳು ಮತ್ತು ವಿದೇಶಗಳಲ್ಲಿ ವಾಸಿಸುವ ಮೆನಾರ್‌ನ ಅನೇಕ ನಿವಾಸಿಗಳು ಆಚರಣೆಗಳಲ್ಲಿ ಭಾಗವಹಿಸಲು ಮನೆಗೆ ಮರಳುತ್ತಾರೆ.

ಹಬ್ಬದ ಆಚರಣೆಯ ಭಾಗವಾಗಿ ಸಂಜೆಯ ವೇಳೆ ಸಾಂಪ್ರದಾಯಿಕ ಆಚರಣೆಗಳು ಮತ್ತು ಗ್ರಾಮದಲ್ಲಿ ಅತಿಥಿಗಳ ಸ್ವಾಗತ ನಡೆಯುತ್ತದೆ. ಹಗಲಿನಲ್ಲಿ ಓಂಕಾರೇಶ್ವರ ಚೌಕ್‌ನಲ್ಲಿ 52 ಹಳ್ಳಿಗಳ ಮೆನಾರಿಯಾ ಬ್ರಾಹ್ಮಣರ ಸಮ್ಮುಖದಲ್ಲಿ ಅಮಲ್ ಕಸುಮ್ ಆಚರಣೆ ನಡೆಸಲಾಗುತ್ತದೆ. ಅಂತಿಮವಾಗಿ, ರಣಬಂಕುರಾ ಡ್ರಮ್‌ ಬಾರಿಸುವ ಮೂಲಕ ಸಮಾರಂಭ ಮುಕ್ತಾಯಗೊಳ್ಳುತ್ತದೆ. ಬಳಿಕ ಅತಿಥಿಗಳನ್ನು ಗೌರವಿಸಲಾಗುತ್ತದೆ.

ರಾತ್ರಿಯಾಗುತ್ತಿದ್ದಂತೆ ಗ್ರಾಮಸ್ಥರು ಸಾಂಪ್ರದಾಯಿಕ ಉಡುಪು ಧರಿಸಿ ಓಂಕಾರೇಶ್ವರ ಚೌಕ್‌ನಲ್ಲಿ ಬಂದೂಕು ಮತ್ತು ಸಾಂಪ್ರದಾಯಿಕ ಫಿರಂಗಿಗಳನ್ನು ಹಿಡಿದುಕೊಂಡು ಬರುತ್ತಾರೆ. ಗೊತ್ತುಪಡಿಸಿದ ಸಿಗ್ನಲ್‌ನಲ್ಲಿ ಏಕಕಾಲದಲ್ಲಿ ಆಕಾಶದತ್ತ ಗುಂಡುಗಳನ್ನು ಹಾರಿಸಲಾಗುತ್ತದೆ. ಜೊತೆಗೆ ಪಟಾಕಿಗಳನ್ನೂ ಸಿಡಿಸಲಾಗುತ್ತದೆ. ಈ ಸ್ಫೋಟಗಳ ಶಬ್ದವು ಐದು ಕಿಲೋಮೀಟರ್‌ಗಳವರೆಗೂ ಕೇಳಿಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಇದರ ಜೊತೆಗೆ ಸಿರೋಹಿ ಜಿಲ್ಲೆಯ ಅಬು ರಸ್ತೆಯ ಬುಡಕಟ್ಟು ಪ್ರಾಬಲ್ಯದ ಭಖರು ಪ್ರದೇಶದಲ್ಲಿ ಹೋಳಿಯ ಮತ್ತೊಂದು ವಿಶಿಷ್ಟ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಹೋಳಿಕಾ ದಹನ್ ಆಚರಣೆಯ ನಂತರ, ಗ್ರಾಮಸ್ಥರು ತಮ್ಮ ಜಾನಪದ ದೇವತೆ ಭಖರ್ ಬಾಬಾಜಿ ಮತ್ತು ಕುಲದೇವಿ ಮಾತಾಜಿಯ ಹೆಸರುಗಳನ್ನು ಜಪಿಸುತ್ತಾ ಕೆಂಡದ ಮೇಲೆ ನಡಿಯುತ್ತಾರೆ. ಹರಕೆಗಳ ಈಡೇರಿಕೆಗೆ ಈ ಆಚರಣೆ ನಡೆಸಲಾಗುತ್ತದೆ ಎಂಬ ನಂಬಿಕೆ ಇದ್ದು, ಭಕ್ತಿ ಮತ್ತು ಕೃತಜ್ಞತೆಯ ಆಚರಣೆಯಾಗಿ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!