ಉದಯವಾಹಿನಿ, ಟೆಹ್ರಾನ್, ಇರಾನ್: ಅಮೆರಿಕ ಮತ್ತು ಇಸ್ರೇಲಿ ದಾಳಿಯಿಂದ ಇರಾನ್‌ನಲ್ಲಿ ಇದುವರೆಗೆ ಸಾವಿನ ಸಂಖ್ಯೆ 1,230 ಕ್ಕೆ ಏರಿಕೆಯಾಗಿದೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ಗಾರ್ಡ್‌ಗಳು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಕ್ಷಿಪಣಿಗಳೊಂದಿಗೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಟನ್ ಸಿಡಿತಲೆಗಳನ್ನು ಹೊತ್ತ ಭಾರೀ ಖೋರ್ರಾಮ್‌ಶಹರ್ -4 ಕ್ಷಿಪಣಿಗಳನ್ನು ಇಂದು ಮುಂಜಾನೆ ಟೆಲ್ ಅವೀವ್‌ನ ಹೃದಯಭಾಗ, ಬೆನ್ ಗುರಿಯನ್ ವಿಮಾನ ನಿಲ್ದಾಣ ಮತ್ತು ವಿಮಾನ ನಿಲ್ದಾಣದಲ್ಲಿರುವ ಇಸ್ರೇಲಿ ವಾಯುಪಡೆಯ 27ನೇ ಸ್ಕ್ವಾಡ್ರನ್‌ನ ನೆಲೆಯ ಕಡೆಗೆ ಹಾರಿಸಲಾಗಿದೆ ಎಂದು ಗಾರ್ಡ್‌ಗಳು ತಸ್ನಿಮ್ ಸುದ್ದಿ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇರಾನ್‌ನ IRIB ಪ್ರಕಾರ ಹಿಂದೆ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳನ್ನು ಆಯೋಜಿಸಿದ್ದಕ್ಕಾಗಿ ಹೆಸರುವಾಸಿಯಾದ ಟೆಹ್ರಾನ್‌ನ ಆಜಾದಿ ಕ್ರೀಡಾಂಗಣವು ದೇಶದ ಮೇಲಿನ ದಾಳಿಯಲ್ಲಿ ನಾಶವಾಗಿದೆ. IRIB ತನ್ನ X ಪೋಸ್ಟ್‌ನಲ್ಲಿ ಕ್ರೀಡಾಂಗಣದ ಸುತ್ತ ಎದ್ದಿರುವ ಹೊಗೆಯನ್ನ ತೋರಿಸುವ ದೃಶ್ಯಗಳನ್ನು ಪೋಸ್ಟ್ ಮಾಡಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ 12000 ಆಸನಗಳ ಆಜಾದಿ ಕ್ರೀಡಾಂಗಣ ನಾಶವಾಗಿದೆ. ದಶಕಗಳಿಂದ ಅಂತಾರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸಿದ್ದ ಸ್ಥಳ. ಕ್ರೀಡಾಂಗಣಗಳಲ್ಲಿ ಪರಮಾಣು ಬಾಂಬ್‌ಗಳು ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸಲಾಗುವುದಿಲ್ಲ. ಇಲ್ಲಿ ಇಸ್ರೇಲ್ ದಾಳಿ ಮಾಡಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಲೆಬನಾನ್‌ನಲ್ಲಿ ಸಾವಿನ ಸಂಖ್ಯೆ 77ಕ್ಕೆ ಏರಿಕೆ: ಸೋಮವಾರ ಇಸ್ರೇಲ್ ಮತ್ತು ಹೆಜ್ಬುಲ್ಲಾ ಉಗ್ರಗಾಮಿ ಗುಂಪಿನ ನಡುವಿನ ಯುದ್ಧದಲ್ಲಿ ಲೆಬನಾನ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 77ಕ್ಕೆ ಏರಿದೆ. ಸುಮಾರು 527 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಸಾವು – ನೋವುಗಳಲ್ಲಿ ಎಷ್ಟು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಏಳು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಈ ಹಿಂದೆ ಹೇಳಿತ್ತು. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳು ಮಧ್ಯಪ್ರಾಚ್ಯದಲ್ಲಿ ಹೊಸ ಯುದ್ಧಕ್ಕೆ ನಾಂದಿ ಹಾಡಿದ ನಂತರ, ಸುಮಾರು ಒಂದು ವರ್ಷಗಳ ಬಳಿಕ ಹೆಜ್ಬುಲ್ಲಾ ಇಸ್ರೇಲ್ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿ ದಾಳಿ ಮಾಡಿದೆ. ಇಸ್ರೇಲ್ ದಕ್ಷಿಣ ಲೆಬನಾನ್ ಮತ್ತು ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
