ಉದಯವಾಹಿನಿ, ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಸಿಪಿಐ(ಎಂ) ನಾಯಕ ಎ.ಪದ್ಮಕುಮಾರ್ ಅವರಿಗೆ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯವು ಜಾಮೀನು ನೀಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪದ್ಮಕುಮಾರ್​ ಅವರು ಬಂಧನವಾದ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಹಿರಿಯ ರಾಜಕಾರಣಿ ಇಂದು ಸಂಜೆಯೊಳಗೆ ಜೈಲಿನಿಂದ ಹೊರಬರುವ ನಿರೀಕ್ಷೆಯಿದೆ.
ಕತ್ತಿಲಪ್ಪಲಿ ಪ್ರಕರಣದಲ್ಲಿ ಪದ್ಮಕುಮಾರ್ ಈಗಾಗಲೇ ಜಾಮೀನು ಪಡೆದಿದ್ದಾರೆ. ಆದರೆ, ದ್ವಾರ ಫಲಕಗಳ ಚಿನ್ನ ಕದ್ದ ಪ್ರಕರಣದ ರಿಮಾಂಡ್ ಅವಧಿ ಮುಗಿಯದ ಕಾರಣ ಜೈಲಿನಲ್ಲೇ ಇದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಪ್ರಮುಖ ಆರೋಪಿ ಈಗಾಗಲೇ ಬಿಡುಗಡೆಯಾದಾಗ ಉಳಿದ ಆರೋಪಿಗಳನ್ನು ಕಸ್ಟಡಿಯಲ್ಲಿ ಇಡುವುದು ನ್ಯಾಯವಲ್ಲ ಎಂದು ಕೋರ್ಟ್​ ಹೇಳಿತು.
ಜಾಮೀನು ಮಂಜೂರು ಮಾಡುವುದರ ಜೊತೆಗೆ ಕೆಲ ಷರತ್ತುಗಳನ್ನೂ ಕೋರ್ಟ್​ ವಿಧಿಸಿದೆ. 2 ಲಕ್ಷ ರೂಪಾಯಿ ಬಾಂಡ್​​, ಇಬ್ಬರು ಸಾಕ್ಷಿದಾರರು, ರಾಜ್ಯ ಬಿಟ್ಟು ಹೋಗುವಂತಿಲ್ಲ, ಪಟ್ಟನಂತಿಟ್ಟ ಜಿಲ್ಲೆಗೆ ಪ್ರವೇಶ ನಿರ್ಬಂಧ, ವಾರಕ್ಕೆ 2 ಬಾರಿ ತನಿಖಾಧಿಕಾರಿಗಳ ಮುಂದೆ ಕಡ್ಡಾಯವಾಗಿ ಹಾಜರಾಗುವಂತೆ ಷರತ್ತು ವಿಧಿಸಲಾಗಿದೆ.
ಚಿನ್ನ ದರೋಡೆಯಲ್ಲಿ ಪದ್ಮಕುಮಾರ್ ಅವರ ನೇರ ಭಾಗಿತ್ವ ಇದೆ ಎಂದು ಎಸ್‌ಐಟಿ ಆರೋಪಿಸಿದೆ. ಪ್ರಮುಖ ಆರೋಪಿ ಉನ್ನಿಕೃಷ್ಣನ್​ ಅವರ ಜೊತೆ ಚಿನ್ನ ಕಳವಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಟಿಡಿಬಿ ಸಭೆಗಳ ದಿಕ್ಕು ತಪ್ಪಿಸಿದ್ದಾರೆ ಎಂದೆಲ್ಲಾ ಆರೋಪವಿದೆ. ಟಿಡಿಬಿಯ ಇತರ ಸದಸ್ಯರು ನೀಡಿದ ಸಾಕ್ಷ್ಯಗಳ ಆಧಾರವಾಗಿ ಅವರ ಬಂಧನವಾಯಿತು. ನಂತರ ಹಿರಿಯ ರಾಜಕಾರಣಿಗೆ ಸೇರಿದ ಅರನ್ಮುಲ ನಿವಾಸದ ಮೇಲೆ ದಾಳಿ ನಡೆಸಲಾಯಿತು.

ಈ ಪ್ರಕರಣದಲ್ಲಿ ಬಂಧನದಿಂದ ಬಿಡುಗಡೆಯಾದ ಎಂಟನೇ ವ್ಯಕ್ತಿ ಪದ್ಮಕುಮಾರ್. ಚಾರ್ಜ್‌ಶೀಟ್ ಸಲ್ಲಿಸುವಲ್ಲಿನ ವಿಳಂಬವು ಮೊದಲ ಆರೋಪಿ ಮತ್ತು ಇತರ ನಾಲ್ವರು ಡೀಫಾಲ್ಟ್ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಆದರೆ ದೇವಾಲಯದ ಮುಖ್ಯ ಅರ್ಚಕ ಮತ್ತು ಎ ಎಸ್ ಶ್ರೀಕುಮಾರ್ ಅವರ ರಿಮಾಂಡ್ ಅವಧಿ ಮುಗಿಯುವ ಮೊದಲು ನಿಯಮಿತ ಜಾಮೀನು ಪಡೆದಿದ್ದಾರೆ. ಕೇಂದ್ರೀಯ ತನಿಖಾ ತಂಡವಾದ ಜಾರಿ ನಿರ್ದೇಶನಾಲಯ (ಇ.ಡಿ.) ಚಿನ್ನ ಕಳ್ಳತನವನ್ನು ತನಿಖೆ ಮಾಡುತ್ತಿದೆ. ಮಾಜಿ ಟಿಡಿಬಿ ಅಧ್ಯಕ್ಷ ಎನ್. ವಾಸು ಅವರನ್ನು ಇತ್ತೀಚೆಗೆ ಸತತ ವಿಚಾರಣೆ ನಡೆಸಿತ್ತು. ಪದ್ಮಕುಮಾರ್ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!