ಉದಯವಾಹಿನಿ, ಬೆಂಗಳೂರು: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ ೨೯ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಬಂಧನ ಖಂಡಿಸಿ ಕರವೇ ಕಾರ್ಯಕರ್ತರು ಹಾಗೂ ಡಾ.ರಾಜ್‌ಕುಮಾರ್ ಪುತಿಮೆ ಪ್ರತಿಷ್ಠಾಪನಾ ಟ್ರಸ್ಟ್ ಸದಸ್ಯರು ಪ್ರತಿಭಟನೆ ಮಾಡಿದರು.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಹೋರಾಟಗಾರರು, ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವಂತೆ ದಿಟ್ಟ ಹೋರಾಟ ಮಾಡಿದ ಕರವೇ ಕಾರ್ಯಕರ್ತರನ್ನು ಬಂಧಿಸಿದ್ದು ಖಂಡನೀಯ. ಕೂಡಲೇ ಎಲ್ಲರನ್ನೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಮಾತೃಭಾಷೆ ಕನ್ನಡ ನಮ್ಮದೇ ನೆಲ ಕರ್ನಾಟಕದಲ್ಲಿ ಅಗ್ರಮಾನ್ಯ ಭಾಷೆಯಾಗಿ ಉಳಿಯಬೇಕು ಮತ್ತು ಬೆಳೆಯಬೇಕು. ಆ ಮೂಲಕ ಅದರ ಆಸ್ಥಿತೆಯನ್ನು ಶಾಶ್ವತವಾಗಿ ಬೇರೆ ಯಾವುದೇ ಭಾಷೆಯ ಹಂಗು ಇಲ್ಲದೆ ಕಾಪಾಡಬೇಕು. ಪ್ರಾಣ ಬಿಟ್ಟೇವು ಹೊರತು ಕಡ್ಡಾಯವಾಗಿ ಕರ್ನಾಟಕದ ಯಾವುದೇ ಮೂಲೆಯ ನಾಮಫಲಕಗಳಲ್ಲಿ ಕನ್ನಡ ಇಲ್ಲದೆ ಹೋದರೆ ಬಿಡಲಾರೆವು ಎಂದು ಹೋರಾಟಗಾರರು ಹೇಳಿದರು.
ರಾಜ್ಯ ಸರ್ಕಾರ ಹೋರಾಟಗಾರರನ್ನು ಬಿಡುಗಡೆ ಮಾಡಲಿ.ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ಹೊರಹಾಕಿದರು.
