ಉದಯವಾಹಿನಿ, ಕೋಲಾರ:  ದೇವಾಲಯಗಳ ನಗರಿ ಶ್ರೀ ಕ್ಷೇತ್ರ ಕೈವಾರದಲ್ಲಿ ಅಮರನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ ಮತ್ತು ಸದ್ಗುರು ಯೋಗಿನಾರೇಯಣ ಮಠದಲ್ಲಿ ಹೊಸವರ್ಷದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನೇರವೇರಿಸಲಾಯಿತು. ದೇವಾಲಯಗಳನ್ನು ತಳಿರು ತೋರಣ, ಹೂಗಳಿಂದ ಸಿಂಗರಿಸಲಾಗಿತ್ತು.
ಭಕ್ತಾದಿಗಳು ದೂರದ ಊರುಗಳಿಂದ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ೨೦೨೪ ಹೊಸವರ್ಷದ ಮೊದಲನೆ ದಿನ ದೇವರ ದರ್ಶನ ಪಡೆದರು. ಕಾಲಜ್ಞಾನಿ ಸದ್ಗುರು ಯೋಗಿನಾರೇಯಣ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳಿಗ್ಗೆ ಘಂಟನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಪೂಜೆಗಳನ್ನು ಆರಂಭಿಸಲಾಯಿತು. ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ ಪೂಜೆಯನ್ನು ಸಲ್ಲಿಸಲಾಯಿತು. ತಾತಯ್ಯನವರು ಜೀವ ಸಮಾಧಿಸ್ಥರಾಗಿರುವ ಮೂಲ ಬೃಂದಾವನವನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ತಾತಯ್ಯನವರ ದರ್ಶನವನ್ನು ಪಡೆದು ಪುನೀತರಾದರು.
ಸದ್ಗುರು ಯೋಗಿನಾರೇಯಣ ತಾತಯ್ಯನವರ ಉತ್ಸವ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಅಲಂಕರಿಸಿ ಕೈವಾರದ ಪ್ರಮುಖ ಬೀದಿಗಳಲ್ಲಿ ಉತ್ಸವವನ್ನು ನೆರವೇರಿಸಲಾಯಿತು. ಮಠದ ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಂಜೆ ವಿಶೇಷ ಮಹಾಮಂಗಳಾರತಿ ನೆರವೇರಿಸಲಾಯಿತು. ಕೈವಾರದ ಬೆಟ್ಟದ ಮೆಟ್ಟಲುಗಳಿಗೆ ಹೊಸ ವರ್ಷದ ಪ್ರಯುಕ್ತ ದೀಪಾರಾಧನೆಯನ್ನು ಸ್ಠಳೀಯ ಗ್ರಾಮಸ್ಥರ ವತಿಯಿಂದ ಏರ್ಪಡಿಸಲಾಗಿತ್ತು. ಸಂಜೆ ವಿದ್ಯುತ್ ದೀಪಗಳಿಂದ ಬೆಟ್ಟವನ್ನು ಅಲಂಕರಿಸಲಾಗಿತ್ತು. ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಭಿಷೇಕ ಮತ್ತು ಪೂಜಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಶ್ರೀಯೋಗಿ ನಾರೇಯಣ ಮಠದ ನೂತನ ಅನ್ನದಾನ ಭವನದಲ್ಲಿ ಊಟದ ವ್ಯವಸ್ಥೆಯನ್ನು ಟ್ರಸ್ಟ್ ಸಮಿತಿಯು ಆಯೋಜಿಸಿದ್ದರು.

Leave a Reply

Your email address will not be published. Required fields are marked *

error: Content is protected !!