ಉದಯವಾಹಿನಿ, ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ರೂಪಾಂತರ ಜೆಎನ್.೧ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ ೧೯೯ ಮಂದಿಗೆ ಜೆಎನ್.೧ ಸೋಂಕು ಕಾಣಿಸಿಕೊಂಡಿದೆ.
ಜಿನೋಮಿಕ್ ಸೀಕ್ವೆನ್ಸ್ ವರದಿಯಲ್ಲಿ ೧೯೯ ಮಂದಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇದುವರೆಗೆ ೬೦೧ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ರವಾನಿಸಲಾಗಿತ್ತು.
ಡಿ. ೨೫ ರಂದು ಮೊದಲ ವರದಿ ಬಂದಿದ್ದು, ೬೪ ಮಾದರಿಗಳ ಪೈಕಿ ೩೫ ಮಂದಿಗೆ ಜೆಎನ್.೧ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ನಿನ್ನೆ ೨೦೨ ಮಾದರಿಗಳ ವರದಿಯಲ್ಲಿ ೧೬೫ ಮಂದಿಗೆ ಜೆಎನ್.೧ ದೃಢಪಟ್ಟಿದೆ. ಇಲ್ಲಿಯವರೆಗೂ ೧೯೯ ಜನರಿಗೆ ಜೆಎನ್.೧ ಸೋಂಕು ತಗುಲಿದ್ದು, ೨೯ ಜನರಿಗೆ ಎಕ್ಸ್‌ಬಿಬಿ ಉಪತಳಿ ಸೋಂಕು ತಗುಲಿದೆ. ಅದೇ ರೀತಿ ಇನ್ನಿತರ ೩೫ ಮಂದಿಯಲ್ಲಿ ರೂಪಾಂತರಿ ಸೋಂಕು ಪತ್ತೆಯಾಗಿದೆ.
ಮೂರು ವರ್ಷಗಳಿಂದ ಇಡೀ ವಿಶ್ವದಲ್ಲಿ ಕೊರೊನಾ ಆರ್ಭಟ ಮಿತಿ ಮೀರಿತ್ತು. ಕೊರೊನಾ ಹೋಗಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಹೊಸ ರೂಪದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ರೂಪಾಂತರಿ ತಡೆಯಲು ಸರ್ಕಾರ ಕಠಿಣಕ್ರಮ ಕೈಗೊಂಡಿದೆ.
