ಉದಯವಾಹಿನಿ, ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಪಟ್ಟಂತೆ ಹಿಂದಿನ ಸರ್ಕಾರ ರೂಪಿಸಿದ್ದ ನಿಯಮಗಳನ್ನು ಪರಿಷ್ಕರಣೆ ಮಾಡುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆಗೂ ಮೊದಲು ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಸಮಾವೇಶ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಒಂದು ನಿರ್ಣಯ ಮಾಡಲಾಗಿತ್ತು. ಅದರಂತೆಯೇ, ಒಳ ಮೀಸಲಾತಿ ವಿಚಾರದಲ್ಲಿ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾವೆಲ್ಲ ಅಭಿಪ್ರಾಯ ಪಟ್ಟಿದ್ದೇವೆ.ಸದಾಶಿವ ಆಯೋಗದ ವರದಿಯನ್ನು ಎರಡು ಸದನದಲ್ಲಿ ಮಂಡಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಹಿಂದಿನ ಸರ್ಕಾರವು ಒಂದು ಉಪಸಮಿತಿಯನ್ನು ರಚಿಸಿ, ವರದಿಯನ್ನು ರಿಜೆಕ್ಟ್ ಮಾಡಿದೆ. ನಂತರ ಬೇರೆ ವರದಿಯನ್ನು ತೆಗೆದುಕೊಂಡು ಮೀಸಲಾತಿ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಶಿಫಾರಸ್ಸಿನಲ್ಲಿ ಒಳ ಮೀಸಲಾತಿಯಲ್ಲಿ ಇಂತಿಷ್ಟು ಮೀಸಲಾತಿ ನೀಡಬೇಕೆಂದು ಹೇಳಲಾಗಿತ್ತು. ಆದರೆ ಈ ಪ್ರಕ್ರಿಯೆಯು ಕಾನೂನಾತ್ಮಕವಾಗಿ ನಡೆದಿಲ್ಲ. ಈಗ ಅದನ್ನು ಪುನರ್ ಪರಿಶೀಲನೆ ನಡೆಸುತ್ತೇವೆ. ಸಂವಿಧಾನ 241 ತಿದ್ದುಪಡಿ ಆಗಬೇಕು. ಈ ಬಗ್ಗೆ ಸರ್ಕಾರದಲ್ಲಿ ಚರ್ಚಿಸಬೇಕಾಗುತ್ತದೆ.
ಇದನ್ನು ಸರ್ಕಾರ ಯಾವ ರೀತಿ ನಿರ್ಧಾರ ಮಾಡಬೇಕಾಗುತ್ತದೆ ಎಂಬುದನ್ನು ಕ್ಯಾಬಿನೇಟ್ಗೆ ತರಬೇಕಾಗುತ್ತದೆ. ಹಿಂದಿನ ಸರ್ಕಾರವು ವರದಿಯನ್ನು ಸದನದಲ್ಲಿ ರಿಜೆಕ್ಟ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ಈ ವಿಷಯವನ್ನು ಮತ್ತೇ ಸದನಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ.
