ಉದಯವಾಹಿನಿ, ಬೆಂಗಳೂರು: ರಾಜ್ಯದ 75 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಅಂಗೀಕೃತ ಪಟ್ಟಿ ಇದೇ ದಿನ ಪ್ರಕಟವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ರಾಜ್ಯದಲ್ಲಿ ಪಕ್ಷವನ್ನು ಅಕಾರಕ್ಕೆ ತಂದಿದ್ದಾರೆ. ನೇಮಕಾತಿ ಅವರ ಹಕ್ಕು ಎಂದು ಹೇಳಿದರು. 39 ಮಂದಿ ಕಾರ್ಯಕರ್ತರಿಗೆ ಹಾಗೂ 36 ಜನ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ನೇಮಕಾತಿ ಮಾಡಲಾಗುವುದು ಎಂದರು.
ನೇಮಕಾತಿಯ ಬೆನ್ನಲ್ಲೇ ಕೆಪಿಸಿಸಿ ಪುನರ್ ರಚನೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ನಾಳೆ ಸಂಜೆ 4.30 ಕ್ಕೆ ರಾಜ್ಯ ಚುನಾವಣಾ ಸಮಿತಿಯ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯ ಭೇಟಿಗಾಗಿ ಇಂದು ಆಗಮಿಸುತ್ತಿದ್ದಾರೆ. ಹೀಗಾಗಿ ಅವರನ್ನು ಆಹ್ವಾನಿಸಿ ಮುಖ್ಯಮಂತ್ರಿಯವರು, ಸಚಿವರು ಹೋಗಬೇಕಿದೆ. ಜನವರಿ 19 ರಂದು ನಿಗದಿಯಾಗಿದ್ದ ಸಭೆಯನ್ನು ಒಂದು ದಿನ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದರು.
ಸಮಿತಿಯಲ್ಲಿ ಈ ಹಿಂದೆ ಸದಸ್ಯರಾಗಿದ್ದವರೇ ಮುಂದುವರೆಯಲಿದ್ದಾರೆ. ಹೆಚ್ಚುವರಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರನ್ನು ವಿಶೇಷ ಆಹ್ವಾನಿತರನ್ನಾಗಿ ಸೇರ್ಪಡೆ ಮಾಡಲಾಗಿದೆ. ಉಳಿದಂತೆ ಎಲ್ಲಾ ಸದಸ್ಯರೂ ಮೊದಲಿನಂತೆಯೇ ಇರಲಿದ್ದಾರೆ ಎಂದರು. ಸಮಿತಿಯ ಸಭೆಯಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು. ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಹೇಳಿದರು.
