
ಉದಯವಾಹಿನಿ ಶಿಡ್ಲಘಟ್ಟ: ದಿಬ್ಬೂರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 39 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಡಿ.ಸಿ ಉಮಾ ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಂಘದ ಶಿಕ್ಷಕರು ಸನ್ಮಾನಿಸಿ ಬೀಳ್ಕೊಟ್ಟರು.ಡಿ.ಸಿ ಉಮಾ ಅವರು ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದವರು. ಸಾದಲಿ ಗ್ರಾಮದ ಎಸ್.ಬಿ.ನಾರಾಯಣಸ್ವಾಮಿ ಅವರನ್ನು ವಿವಾಹವಾದರು. ಶಿಕ್ಷಕಿಯಾಗಿ ಸೆ.11.1985 ರಲ್ಲಿ ನೇಮಕಗೊಂಡು ತಾನು ವಿದ್ಯಾಭ್ಯಾಸ ಮಾಡಿದ ದಿಬ್ಬೂರಹಳ್ಳಿ ಗ್ರಾಮದ ಶಾಲೆಯಲ್ಲೇ ಶಿಕ್ಷಕಿ ವೃತ್ತಿಯನ್ನು ಪ್ರಾರಂಭಿಸಿ, 39ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ 2024 ಜ.31 ರಂದು ವಯೋ ನಿವೃತ್ತಿ ಪಡೆದರು. ಅತ್ಯಂತ ಶಿಸ್ತಿನ ಶಿಕ್ಷಕಿ ಡಿ.ಸಿ ಉಮಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲ 10 ಹಳ್ಳಿಗಳಿಗೆ ಅತ್ಯಂತ ಪ್ರೀತಿಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು.ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಸಾಮಾನ್ಯವಾದರೂ, ಕರ್ತವ್ಯ ಸಲ್ಲಿಸಿದ ವೇಳೆಯಲ್ಲಿ ಮಾಡಿದ ಉತ್ತಮ ಕೆಲಸ, ನಿಷ್ಟೆ ನಮ್ಮ ಜೀವನದುದ್ದಕ್ಕೂ ಸ್ಮರಿಸುವಂತೆ ಮಾಡುತ್ತದೆ, ಡಿ.ಸಿ.ಉಮಾ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಗೌರವ ಕಾರ್ಯದರ್ಶಿ ಎ.ವಿ ವೆಂಕಟನರಸಪ್ಪ ಮಾತನಾಡಿ,ಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಡಿ.ಸಿ ಉಮಾ ಅವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯ ಉಪನ್ಯಾಸಕರಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಡಿ.ಸಿ ಉಮಾ ಶಿಕ್ಷಕಿ ಮಾತನಾಡಿದರು, ಶಿಕ್ಷಕ ವೃತ್ತಿ ಎನ್ನುವುದು ಶ್ರೇಷ್ಠವಾದ ಕಾಯಕ, ಈ ಕಾಯಕ ಮಾಡುವುದು ಎಲ್ಲರಿಗೂ ದೊರೆಯುವುದಿಲ್ಲ. ಈ ಕಾಯಕ ಮಾಡಲು ನಾವು ಪುಣ್ಯ ಮಾಡಿರಬೇಕು. ಒಬ್ಬ ಪಾಲಕರಿಗೆ ತಮ್ಮ ಮಕ್ಕಳ ಬಗ್ಗೆ ಎಷ್ಟು ಜವಾಬ್ದಾರಿ ಇರುತ್ತೊ ಅಷ್ಟೇ ಜವಾಬ್ದಾರಿ ಶಿಕ್ಷಕರಿಗೂ ಇರುತ್ತೆ, ಈ 39 ವರ್ಷಗಳ ಸೇವೆಯಲ್ಲಿ ಸಾವಿರಾರು ಮಕ್ಕಳು ನನ್ನ ಕೈಯಲ್ಲಿ ವಿದ್ಯೆ ಕಲಿತು ಉನ್ನತ ಹುದ್ದೆಯಲ್ಲಿದ್ದಾರೆ. ಆ ಉನ್ನತ ಹುದ್ದೆಯಲ್ಲಿರುವ ಮಕ್ಕಳು ಭೇಟಿಯಾದಾಗ ನನ್ನ ಯೋಗಕ್ಷೇಮದ ಜೊತೆಗೆ ನನ್ನ ಆಶೀರ್ವಾದ ಪಡೆಯುತ್ತಾರಲ್ಲ ಅದರಲ್ಲಿ ಇರುವಂತ ಆನಂದ ಬೇರೆ ಎಲ್ಲೂ ಇಲ್ಲ ಎಂದು ಭಾವುಕ ನುಡಿಗಳನ್ನ ಆಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಂಘದ ಖಜಾಂಚಿ ಸೀನಪ್ಪ, ಸುಂದರಚಾರಿ, ಬಿ.ರಾಜೇಶ್ವರಿ, ಸರಸ್ವತಮ್ಮ, ಅರುಣ, ಸುದರ್ಶನ್, ಮಂಜುನಾಥ್, ಪಿಳ್ಳಣ್ಣ,ಗ್ರಾಮಸ್ಥರಾದ ಶ್ರೀರಂಗಪ್ಪ, ಮಂಜುನಾಥ, ಹಳೆಯ ವಿದ್ಯಾರ್ಥಿಗಳಾದ ಪ್ರಭು, ನವೀನ್, ಯಶ್ವಂತ್, ಮನ್ಮಥರಾಜ, ಪ್ರವೀಣ್, ಮತ್ತಿತರು ಇದ್ದರು.
