ಉದಯವಾಹಿನಿ,ಹಂಪಿ(ವಿಜಯನಗರ), : ಹಂಪಿ ಉತ್ಸವದ ಪ್ರಮುಖ ಆಕರ್ಷಣೆ ಎಂಬಂತೆ ಸಾಹಸ ಕ್ರೀಡೆಗಳ ಅಂಗಳವಾಗಿ ಮಲಪನಗುಡಿ ಗ್ರಾಮದ ಬಳಿ ನಿರ್ಮಿಸಲಾಗಿದ್ದ ಬೃಹತ್ ಕುಸ್ತಿ ಅಖಾಡದಲ್ಲಿ ಮದಗಜಗಳಂತೆ ಸೆಣೆಸಾಡಿದ ಕುಸ್ತಿಪಟುಗಳು ಮೈನವಿರೇಳಿಸಿ ಬೆಳಗಾವಿಯ ಮುಸ್ಲಿಕ್ ಆಲಂ ರಾಜಾಸಾಬ್ ಹಂಪಿ ಕೇಸರಿ ಪಟ್ಟವನ್ನು ತಮ್ಮದಾಗಿಸಿಕೊಂಡರು.
ಮದಗಜಗಳಂತಹ ಹುಮ್ಮಸ್ಸು, ಎದುರಾಳಿಯನ್ನು ಕೆಡವಿಹಾಕುವ ಕೆಚ್ಚು, ಭುಜತಟ್ಟಿಕೊಂಡು ಕೈ ಕೈ ಮಿಲಾಯಿಸಿ ಕುಸ್ತಿಪಟುಗಳು ಪ್ರತಿಸ್ಪರ್ಧಿಗಳನ್ನು ಮಣಿಸುವ ದೃಶ್ಯ ನೋಡುಗರಲ್ಲಿ ರೋಮಾಂಚನ, ಗೆದ್ದವರಿಗೆ ಚಪ್ಪಾಳೆಯ ಮೆಚ್ಚುಗೆ… ಇವು ಶನಿವಾರ ಮಲಪನಗುಡಿ ಗ್ರಾಮದ ಬಳಿಯ ಕುಸ್ತಿ ಅಖಾಡದಲ್ಲಿ ಕಂಡು ಬಂದ ರೋಚಕ ದೃಶ್ಯಗಳು.
ನೆತ್ತಿಯ ಮೇಲೆ ಸೂರ್ಯ ಆಗಮಿಸಿದ್ದರಿಂದ ಮೇಲೆ ರಣರಣ ಬಿಸಿಲು, ಅಖಾಡದಲ್ಲಿ ಕುಸ್ತಿ ಪಂದ್ಯಾಟದ ಬಿಸಿ ನೆರೆದಿದ್ದ ಸಮೂಹದವರ ಬೆವರಿಳಿಸುತ್ತಿದ್ದರೆ, ಪೈಲ್ವಾನರು ಸಹ ತಮ್ಮ ಎದುರಾಳಿಗಳ ಬೆವರಿಳಿಸುವಲ್ಲಿ ನಿರತರಾಗಿದ್ದ ದೃಶ್ಯ ಎಂಥವರನ್ನೂ ಕುತೂಹಲದಿಂದ ನಿಂತು ವೀಕ್ಷಿಸುವಂತೆ ಮಾಡಿತ್ತು.
ಹೊಸಪೇಟೆ-ಹಂಪಿಯ ದಾರಿಯಲ್ಲಿನ ಮಲಪನಗುಡಿ ಗ್ರಾಮದ ಬಳಿಯ ನಿರ್ಮಿಸಲಾಗಿರುವ ಕುಸ್ತಿ ಅಖಾಡದಲ್ಲಿ ಹಂಪಿ ಉತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬಯಲು ಕುಸ್ತಿ ಸ್ಪರ್ಧೆಗೆ ಹೊಸಪೇಟೆ ಶಾಸಕ ಹೆಚ್.ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ದಿವಾಕರ್ ಅವರು ಮಣ್ಣಿನ ಪೂಜೆ ನೆರವೇರಿಸುವದೊಂದಿಗೆ ಚಾಲನೆ ನೀಡಿದರು.
ಶಾಸಕ ಗವಿಯಪ್ಪ ಅವರು 86 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಸ್ಪರ್ಧಿಗಳ ನಡುವೆ ಹಸ್ತಲಾಘವ ಮಾಡಿಸಿ, ಕುಸ್ತಿಪಟುಗಳನ್ನು ಅಖಾಡಕ್ಕೆ ಧುಮಿಕಿಸಿದರು.
ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು. ಈ ಬಾರಿ ಮಹಿಳಾ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಕೂಡ ವಿಶೇಷವಾಗಿತ್ತು.

Leave a Reply

Your email address will not be published. Required fields are marked *

error: Content is protected !!