ಉದಯವಾಹಿನಿ , ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಹಾ ಅಥವಾ ಕಾಫಿ ಕುಡಿಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಅಭ್ಯಾಸ. ಆದರೆ, ಇದೇ ಅಭ್ಯಾಸವನ್ನು ನಮ್ಮ ಮಕ್ಕಳಿಗೂ ರೂಢಿಸುವುದು ಎಷ್ಟು ಅಪಾಯಕಾರಿ ಎಂಬ ಅರಿವು ನಮಗಿದೆಯೇ? ದೊಡ್ಡವರಿಗೆ “ಮೈಂಡ್ ಫ್ರೆಶ್” ಮಾಡುವ ಈ ಪಾನೀಯಗಳು, ಬೆಳೆಯುವ ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ದೊಡ್ಡ ಅಡ್ಡಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ತಡೆ
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಕಬ್ಬಿಣಾಂಶ ಮತ್ತು ಇತರ ಪೋಷಕಾಂಶಗಳು ಬಹಳ ಮುಖ್ಯ. ಚಹಾ ಮತ್ತು ಕಾಫಿಯಲ್ಲಿರುವ ಕೆಫೀನ್ ಅಂಶವು ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ದೇಹವು ಹೀರಿಕೊಳ್ಳದಂತೆ ತಡೆಯುತ್ತದೆ. ಇದರಿಂದ ಮಕ್ಕಳು ಎಷ್ಟೇ ಪೌಷ್ಟಿಕ ಆಹಾರ ತಿಂದರೂ ಅದು ಅವರ ದೇಹಕ್ಕೆ ಹಿಡಿಯುವುದಿಲ್ಲ, ಪರಿಣಾಮವಾಗಿ ರಕ್ತಹೀನತೆ ಕಾಣಿಸಿಕೊಳ್ಳಬಹುದು.
ನರಮಂಡಲದ ಮೇಲೆ ದುಷ್ಪರಿಣಾಮ ಕೆಫೀನ್ ಮಕ್ಕಳ ನರಮಂಡಲವನ್ನು ಅತಿಯಾಗಿ ಪ್ರಚೋದಿಸುತ್ತದೆ. ಇದರಿಂದ ಮಕ್ಕಳಲ್ಲಿ ಅನಗತ್ಯ ಆತಂಕ, ಕಿರಿಕಿರಿ ಮತ್ತು ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಓದಿನ ಮೇಲೆ ಗಮನ ಹರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ, ಇದು ಅವರ ನಿದ್ರೆಯ ಚಕ್ರವನ್ನು ಏರುಪೇರು ಮಾಡಿ, ಸದಾ ಕೋಪಗೊಳ್ಳುವಂತೆ ಮಾಡುತ್ತದೆ.
ಹಸಿವು ಮತ್ತು ಜೀರ್ಣಕ್ರಿಯೆಯ ಸಮಸ್ಯೆ
ಖಾಲಿ ಹೊಟ್ಟೆಯಲ್ಲಿ ಚಹಾ-ಕಾಫಿ ಕುಡಿಸುವುದರಿಂದ ಹಸಿವನ್ನು ಉತ್ತೇಜಿಸುವ ಹಾರ್ಮೋನುಗಳು ಮಂದವಾಗುತ್ತವೆ. ಇದರಿಂದ ಮಕ್ಕಳಿಗೆ ಊಟ ಸೇರುವುದಿಲ್ಲ. ಜೊತೆಗೆ ಕರುಳಿನಲ್ಲಿ ಆಮ್ಮಿಯತೆ ಹೆಚ್ಚಾಗಿ ಎದೆಯುರಿ, ಮಲಬದ್ಧತೆ ಮತ್ತು ಹೊಟ್ಟೆಯ ನೋವು ಕಾಣಿಸಿಕೊಳ್ಳಬಹುದು.
ಸಕ್ಕರೆಯ ಅತಿಯಾದ ಬಳಕೆ ಮತ್ತು ಹಲ್ಲು ಹುಳುಕು
ಚಹಾ-ಕಾಫಿಯಲ್ಲಿ ಬಳಸುವ ಸಕ್ಕರೆಯು ಮಕ್ಕಳನ್ನು ‘ಹೈಪರ್ ಆಕ್ಟಿವ್ ಮಾಡುವುದಲ್ಲದೆ, ಬೊಜ್ಜು ಮತ್ತು ಹಲ್ಲು ಹುಳುಕಿನ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ.
